newsics.com
ನವದೆಹಲಿ: ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ಅವರ ಸಹೋದರಿ ಹಾಗೂ ಸೋದರಳಿಯನ ಮಧ್ಯರಾತ್ರಿಯ ಹೇಳಿಕೆಯಿಂದ ವಿಶ್ವವಿಖ್ಯಾತ ಕಲಾವಿದನ ನಿಧನವಾರ್ತೆಯಲ್ಲಿ ಗೊಂದಲವುಂಟಾಗಿದೆ.
‘ಝಾಕಿರ್ ಹುಸೇನ್ ಇನ್ನೂ ಜೀವಂತವಾಗಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ’ ಎಂದು ಝಾಕಿರ್ ಅವರ ಸಹೋದರಿ ಖುರ್ಷಿದ್ ಔಲಿಯಾ ಅವರ ಮನವಿ ಗೊಂದಲವುಂಟಾಗಲು ಕಾರಣವಾಗಿದೆ.
ಅಷ್ಟೇ ಅಲ್ಲ, ಝಾಕೀರ್ ಹುಸೇನ್ ಸೋದರಳಿಯ ಅಮೀರ್ ಔಲಿಯಾ ಕೂಡ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಝಾಕೀರ್ ಅವರು ನಿಧನರಾಗಿಲ್ಲ. ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಲು ಪ್ರಪಂಚದಾದ್ಯಂತದ ಅವರ ಎಲ್ಲಾ ಅಭಿಮಾನಿಗಳನ್ನು ನಾವು ಕೇಳಿಕೊಳ್ಳುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
ತಬಲಾ ಮಾಂತ್ರಿಕ ಇನ್ನಿಲ್ಲ ಎಂಬ ಸುದ್ದಿ ಭಾನುವಾರ ರಾತ್ರಿಯಿಂದ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದಾದ ಕೆಲವು ಗಂಟೆಗಳ ಬಳಿಕ ಝಾಕೀರ್ ಸಹೋದರಿ ಖುರ್ಷಿದ್ ಔಲಿಯಾ, ಸೋದರಳಿಯ ಅಮೀರ್ ಔಲಿಯಾ ಅವರು ನೀಡಿರುವ ಹೇಳಿಕೆ ಹಲವರನ್ನು ಗೊಂದಲಕ್ಕೆ ತಳ್ಳಿದೆ.
ಹೃದಯಸಂಬಂಧಿ ಕಾಯಿಲೆ ಹಾಗೂ ತೀವ್ರ ರಕ್ತದೊತ್ತಡದಿಂದ ಭಾನುವಾರ ರಾತ್ರಿ ತಬಲಾ ಮಾಂತ್ರಿಕ ಝಾಕಿರ್ ಹುಸೇನ್ ಕೊನೆಯುಸಿರೆಳೆದರು ಎಂಬ ಸುದ್ದಿ ಭಾರತೀಯ ಮಾಧ್ಯಮ ಸೇರಿ ಹಲವು ವಿದೇಶಿ ಮಾಧ್ಯಮಗಳಲ್ಲೂ ಭಿತ್ತರವಾಗಿದೆ. ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡ ಝಾಕಿರ್ ಹುಸೇನ್ ನಿಧನ ವಾರ್ತೆಯನ್ನು ಪ್ರಕಟಿಸಿತ್ತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯ @MIB_India ಜಗತ್ತು ನಿಜವಾದ ಸಂಗೀತ ಪ್ರತಿಭೆಯನ್ನು ಕಳೆದುಕೊಂಡಿದೆ.
ಸಂಗೀತ ಲೋಕಕ್ಕೆ ಜಾಕಿರ್ ಹುಸೇನ್ ಅವರ ಕೊಡುಗೆ ಎಂದೆಂದಿಗೂ ಚಿರಸ್ಮರಣೀಯ.
#ಜಾಕೀರ್ ಹುಸೇನ್ ಎಂದು ನಿಧನವಾರ್ತೆ ಪ್ರಕಟಿಸಿತು. ಇದನ್ನೇ ಆಧರಿಸಿ ಭಾರತದ ಎಲ್ಲ ಮಾಧ್ಯಮಗಳು ತಬಲಾ ಮಾಂತ್ರಿಕನ ನಿಧನವಾರ್ತೆಯನ್ನು ಪ್ರಕಟಿಸಿವೆ.
ಸಾವಿನ ವರದಿಗಳ ನಡುವೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಇತರರು ತಬಲಾ ವಾದಕನಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಝಾಕಿರ್ ಹುಸೇನ್ ಅವರ ನಿಧನವಾರ್ತೆ ಸ್ಯಾನ್‌ಫ್ರಾನ್ಸಿಸ್ಕೋದಿಂದ ಭಿತ್ತರಗೊಂಡಿದ್ದು, ಈ ಗೊಂದಲವನ್ನು ಭಾರತ ಸರ್ಕಾರವೇ ಪರಿಹರಿಸಬೇಕಿದೆ.

