newsics.com
ವಿಜಯಪುರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಮಗು ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದೆ. ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಗಾಂಧಿಚೌಕ ಪೊಲೀಸರು ಕೊನೆಗೂ ಮಗು ಹಾಗೂ ಕಿಡ್ನಾಪ್ ಮಾಡಿದ್ದ ಖದೀಮನನ್ನು ಪತ್ತೆ ಮಾಡಿದ್ದಾರೆ.
ತನ್ನ ಮಗುವನ್ನು ಕಂಡ ತಾಯಿ ಓಡೋಡಿ ಬಂದು ಮಗುವನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಗಲಕೋಟೆ ಮೂಲದ ರಾಮೇಶ್ವರಿ ಪವಾರ್ ಮಹಿಳೆಯ 1 ವರ್ಷದ ಸಂದೀಪ್ ಎಂಬ ಮಗುವನ್ನು ಅಪರಿಚಿತ ವ್ಯಕ್ತಿ ಕಿಡ್ನಾಪ್ ಮಾಡಿ ಪರಾರಿಯಾಗಿದ್ದ.
ಜಿಲ್ಲಾಸ್ಪತ್ರೆಯಿಂದ ಮಗು ಮಿಸ್ಸಿಂಗ್ ಎನ್ನುವ ಸುದ್ದಿ ಜಿಲ್ಲೆಯ ಜನರನ್ನು ಗಾಬರಿ ಹುಟ್ಟಿಸಿತ್ತು. ಈ ಕುರಿತು ಮಾಹಿತಿ ಪಡೆದ ಗಾಂಧಿ ಚೌಕ ಪೊಲೀಸ್ ಪ್ರದೀಪ್ ತಳಕೇರಿ ಹಾಗೂ ತಂಡ ಮಗು ಪತ್ತೆಗೆಂದು ಕಾರ್ಯಾಚರಣೆಗಿಳಿದಿದೆ.
20 ಗಂಟೆಯ ಬಳಿಕ ಮಗುವನ್ನು ಪತ್ತೆ ಹಚ್ಚುವಲ್ಲಿ ಗಾಂಧಿಚೌಕ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗುವನ್ನು ಪೊಲೀಸರು ಹಸ್ತಾಂತರಿಸುತ್ತಿದ್ದಂತೆ ತಾಯಿ ರಾಮೇಶ್ವರಿ ಮಗುವನ್ನ ಎತ್ತಿಕೊಂಡು ಮುದ್ದಾಡಿದ್ದಾಳೆ.
ಮೂರು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆ ಮುಧೋಳ ನಿವಾಸಿಗಳಾದ ರಾಮೇಶ್ವರಿ ಪವಾರ್ ಎಂಬ ಹೆಣ್ಣು ಮಗಳು, ತನ್ನ ವೃದ್ದ ತಾಯಿ ಪದ್ಮಾಳನ್ನು ಜಿಲ್ಲಾಸ್ಪತ್ರೆಯಲ್ಲಿ ಅಡ್ಮೀಟ್ ಮಾಡಿದ್ದು. ವಿಜಯಪುರದ ನೆಂಟರ ಮನೆಗೆ ಬಂದ ವೇಳೆ ವೃದ್ದೆ ಪದ್ಮಾಳ ಆರೋಗ್ಯ ಹದಗೆಟ್ಟಿದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಹೀಗಾಗಿ ತಾಯಿಯ ಆರೈಕೆಗೆಂದು ರಾಮೇಶ್ವರ ತನ್ನ 1ವರ್ಷದ ಮಗು ಸಂದೀಪ್ ಜತೆಗೆ ಆಸ್ಪತ್ರೆಯಲ್ಲಿದ್ದಳು. ಮಧ್ಯಾಹ್ನ ಜಿಲ್ಲಾಸ್ಪತ್ರೆ ವೈದ್ಯರು ಪದ್ಮಾಳ ಕಫ ಪರೀಕ್ಷೆ ಮಾಡಿಕೊಂಡು ಬರುವಂತೆ ರಾಮೇಶ್ವರಿ ಸೂಚಿಸಿದ್ದರು. ಹೀಗಾಗಿ ತಾಯಿಯ ಜತೆಗೆ ತನ್ನ 1 ವರ್ಷದ ಮಗುವನ್ನು ಆಸ್ಪತ್ರೆಯ ವಾರ್ಡ್‌ನಲ್ಲಿ ಬಿಟ್ಟು ತೆರಳಿದ್ದಳು. ಈ ವೇಳೆ ಅದೇ ವಾರ್ಡ್ ಎದುರಿದ್ದ ಅಪರಿಚಿತ ಆಸಾಮಿಯೊಬ್ಬ ಮಗುವನ್ನ ಕಿಡ್ನಾಪ್ ಮಾಡಿ ಎತ್ತಿಕೊಂಡು ಪರಾರಿಯಾಗಿದ್ದ.
ಜಿಲ್ಲಾಸ್ಪತ್ರೆಯಲ್ಲಿದ್ದ ಮಗು ಕಿಡ್ನಾಪ್ ಅಂದಾಗ ಸಹಜವಾಗಿಯೇ ಪರಿಸ್ಥಿತಿ ಗರಂ ಆಗಿತ್ತು. ಇತ್ತ ಮಗು ಕಾಣೆಯಾಗಿದ್ದರಿಂದ ಮಗುವಿನ ತಾಯಿ ರಾಮೇಶ್ವರ ಕಂಗಾಲಾಗಿ ಕಣ್ಣೀರಿಡುತ್ತಿದ್ದಳು. ಈ ಬಗ್ಗೆ ಪ್ರಕರಣ ಕೈಗೆತ್ತಿಕೊಂಡ ಗಾಂಧಿಚೌಕ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಆಸ್ಪತ್ರೆಯಲ್ಲಿದ್ದ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಸಿಇಎನ್ ಡಿವೈಎಸ್ಪಿ ಸುನೀಲ್ ಕಾಂಬಳೆ, ರಮೇಶ್ ಅವಜಿ ಕೈಜೋಡಿಸಿದ್ದಾರೆ. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸ್ ನಗರದ ಜಿಲ್ಲಾಸ್ಪತ್ರೆ ಸುತ್ತಲಿನ 100ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನ ಪರಿಶೀಲನೆ ಮಾಡಲಾಗಿತ್ತು. ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಕಿಡ್ನಾಪ್ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿ ಮಗುವನ್ನು ವಶಕ್ಕೆ ಪಡೆದು ತಾಯಿಗೆ ಒಪ್ಪಿಸಿದ್ದಾರೆ. ಆರೋಪಿ ಜಿಲ್ಲಾಸ್ಪತ್ರೆಯ ಬಳಿ ಸುಳಿದಾಡುವಾಗಲೆ ಸಿಕ್ಕಿಬಿದ್ದಿದ್ದಾನೆ ಎನ್ನುವುದು ಅಚ್ಚರಿ ಮೂಡಿಸಿದೆ.
ಕಿಡ್ನಾಪ್ ಮಾಡಿ ಸಿಕ್ಕಿಬಿದ್ದ ಆಸಾಮಿಯನ್ನ ದೇವರಹಿಪ್ಪಗಿ ಮೂಲದ ರವಿ ಹರಿಜನ್ ಎನ್ನಲಾಗಿದೆ. ಮಗುವನ್ನು ಕಿಡ್ನಾಪ್ ಮಾಡಿ ಕಲಬುರ್ಗಿವರೆಗೂ ಹೋಗಿ ಮತ್ತೆ ವಾಪಸ್ ಬಂದಿದ್ದಾನೆ ಎನ್ನಲಾಗಿದೆ. ಇತ್ತ ಪೊಲೀಸರ ವಿಚಾರಣೆಯಲ್ಲಿ ಅಚ್ಚರಿಯ ಸಂಗತಿ ಬಿಚ್ಚಿಟ್ಟಿದ್ದಾನೆ. ಕಳೆದ ಎರಡು ದಿನಗಳಿಂದ ವಾರ್ಡ್ ನಂಬರ್ 123ರ ಬಳಿಯೇ ಸುಳಿದಾಡುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿ ಆಸ್ಪತ್ರೆಗೆ ತೋರಿಸಿಕೊಂಡು ಬಾ ಎಂದು ಕಳಿಸಿದ್ರೆ, ಇಲ್ಲಿ ಕುಡಿದ ಮತ್ತಿನಲ್ಲಿ ಹೊರಡಾಳುತ್ತಿದ್ದನಂತೆ. ಅಲ್ಲದೆ ಕೆಲವರು ಹೇಳುವಂತೆ ಈ ಮಗುವನ್ನು ನೋಡಿ ನನ್ನ ಮಗುವಿನಂತೆಯೇ ಇದೆ ಎಂದು ಕೆಲವರ ಬಳಿ ಮಾತನಾಡಿದ್ದ ಎನ್ನಲಾಗಿದೆ. ಇನ್ನು ಪೊಲೀಸ್ ವಿಚಾರಣೆಯಲ್ಲಿ ಮಗು ಅಳುತ್ತಾ ಇತ್ತು, ಸಂತೈಸಲು ತೆಗೆದುಕೊಂಡೆ, ಬಳಿಕ ನನಗೆ ಕರೆ ಬಂತು ಮಗುವನ್ನು ಎತ್ತಿಕೊಂಡು ಹೋದೆ. ಬೆಳಿಗ್ಗೆ ಮತ್ತೆ ಮಗುವನ್ನ ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದೇನೆ ಎಂದಿದ್ದಾನೆ. ಆದ್ರೆ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
Bigg Boss Kannada ಉಗ್ರಂ ಮಂಜು, ಗೌತಮಿ ಗೆಳತನಕ್ಕೆ ಬ್ರೇಕ್ ಬೀಳುತ್ತಾ?