newsics.com
ಚೆನ್ನೈ: ವಾಟ್ಸಪ್ ಗ್ರೂಪ್‌ನ ಸಹಾಯದಿಂದ ದಂಪತಿಗಳು ಮನೆಯಲ್ಲಿಯೇ ಹೆರಿಗೆ ನಡೆಸಿರುವಂತಹ ಘಟನೆ ತಮಿಳುನಾಡಿನ ಕುಂದ್ರತ್ತೂರಿನಲ್ಲಿ ನಡೆದಿದೆ.
ನವೆಂಬರ್ 17 ರಂದು ಸುಕನ್ಯಾಗೆ ಮನೆಯಲ್ಲಿ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣದ ವೈದ್ಯಕೀಯ ಸಹಾಯವನ್ನು ಪಡೆಯುವ ಬದಲು ಮನೋಹರನ್ ತಾನೇ ಹೆರಿಗೆ ನಡೆಸಲು ಮುಂದಾಗಿದ್ದಾರೆ. ಅವರು ವಾಟ್ಸಪ್ ಗ್ರೂಪ್‌ನಲ್ಲಿ ಬಂದ ಹಂತ-ಹಂತದ ಮಾರ್ಗದರ್ಶನವನ್ನು ಅನುಸರಿಸಿದ್ದಾರೆ. ಹೆರಿಗೆ ಪ್ರಕ್ರಿಯೆಯಲ್ಲಿ ಅವರ ಪತ್ನಿಗೆ ಸಹಾಯ ಮಾಡಲು ಗುಂಪಿನ ಸದಸ್ಯರು ಒದಗಿಸಿದ ಸೂಚನೆಗಳು ಮತ್ತು ವಿವರಣೆಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.
ದಂಪತಿ ವಾಟ್ಸಪ್‌ನ “ಹೋಮ್ ಬರ್ತ್ ಎಕ್ಸ್‌ಪೀರಿಯನ್ಸ್” ಎಂಬ ಗುಂಪಿನಲ್ಲಿ ಹಂಚಿಕೊಂಡ ಸಲಹೆಯನ್ನು ಅವಲಂಬಿಸಿ ಹೆರಿಗೆಯನ್ನು ನಡೆಸಿದ್ದಾರೆ. ಯಾವುದೇ ವೈದ್ಯಕೀಯ ಪರಿಶೀಲನೆ ಇಲ್ಲದೇ ಅಪಾಯಕಾರಿಯಾಗಿ ಹೆರಿಗೆ ನಡೆಸಿರುವ ಬಗ್ಗೆ ಅಧಿಕಾರಿಗಳು ಈಗ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಹೆರಿಗೆಯ ನಂತರ, ಸುರಕ್ಷತೆಯ ಉಲ್ಲಂಘನೆಯನ್ನು ಉಲ್ಲೇಖಿಸಿ ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಯಿಂದ ದೂರು ದಾಖಲಿಸಲಾಗಿದೆ.
ಮಗುವಿನ ಜನನದ ಬಳಿಕ ದಂಪತಿಗಳು ನವಜಾತ ಶಿಶುವಿನೊಂದಿಗೆ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ವಿಚಾರ ಬೆಳಕಿಗೆ ಬಂದಿದ್ದು, ಇದು ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನ ಸೆಳೆಯಿತು. ಇದೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.