newsics.com
ದೇಶದಲ್ಲಿ ಸೀರೆಗೆ ತನ್ನದೇ ಆದ ಮಹತ್ವವಿದೆ. ಆದರೆ, ಅದರಿಂದಲೇ ಸ್ತ್ರೀಯರಿಗೆ “ಪೆಟಿಕೋಟ್ ಕ್ಯಾನ್ಸರ್” ಎಂಬ ಕಾಯಿಲೆ ಬರುತ್ತಿರುವ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ.
ಸೀರೆ ಉಟ್ಟರೆ ಕ್ಯಾನ್ಸರ್ ಬರಬಹುದು ಎಂದು ಯಾರಾದರೂ ಹೇಳಿದರೆ ನೀವು ನಂಬಲ್ಲ. ಆದರೆ ಇತ್ತೀಚಿನ ಸಂಶೋಧನೆಯೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.
ಹೌದು, ಸೀರೆ ಧರಿಸುವ ಮಹಿಳೆಯರಿಗೆ ಹೊಸ ರೀತಿಯ ಪೆಟಿಕೋಟ್ ಕ್ಯಾನ್ಸರ್ ಬರಬಹುದು ಎಂದು ಅಧ್ಯಯನಗಳು ತೋರಿಸಿವೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಸೀರೆ ಧರಿಸಿದ ಮಹಿಳೆಯರು ಧರಿಸುವ ಸ್ಕರ್ಟ್ ಅನ್ನು ಬಿಗಿಯಾಗಿ ಕಟ್ಟುವುದರಿಂದ ಈ ಕ್ಯಾನ್ಸರ್ ಬರಬಹುದು ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಸೀರೆ ಜೊತೆಗೆ ಮಹಿಳೆಯರು ಪೆಟಿಕೋಟ್ ಧರಿಸುತ್ತಾರೆ. ಇದು ಸೀರೆ ಜೊತೆಗೆ ಉತ್ತಮ ಆಕಾರವನ್ನು ನೀಡುತ್ತದೆ. ಇನ್ನು ಇದನ್ನು ಕಟ್ಟಲೆಂದು ಮೇಲ್ಭಾಗದಲ್ಲಿ ಹಗ್ಗವೊಂದನ್ನು ನೀಡುತ್ತಾರೆ. ಅನೇಕ ಮಹಿಳೆಯರು ಈ ಹಗ್ಗವನ್ನು ತಮ್ಮ ಸೊಂಟಕ್ಕೆ ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ. ಪೆಟಿಕೋಟ್ ಅನ್ನು ತುಂಬಾ ಬಿಗಿಯಾಗಿ ಕಟ್ಟಿದರೆ, ಇದರಲ್ಲಿರುವ ಹಗ್ಗ ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಈ ಕಾರಣದಿಂದಾಗಿ, ಚರ್ಮವು ಕೆಂಪು ಮತ್ತು ಊದಿಕೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಗುಳ್ಳೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇತ್ತೀಚಿನ ಅಧ್ಯಯನವು ಈ ಗುಳ್ಳೆಗಳು ಮತ್ತು ಹುಣ್ಣುಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಹೇಳಿದೆ. ಆದ್ದರಿಂದಲೇ ಇದನ್ನು ಈಗ ‘ಪೆಟಿಕೋಟ್ ಕ್ಯಾನ್ಸರ್’ ಎಂದು ಕರೆಯುತ್ತಾರೆ.
ಪೆಟಿಕೋಟ್ ಅನ್ನು ತುಂಬಾ ಬಿಗಿಯಾಗಿ ಕಟ್ಟುವುದು ಹೊಟ್ಟೆ ಮತ್ತು ಸೊಂಟದ ಮೇಲೆ ನಿರಂತರ ಒತ್ತಡವನ್ನು ಉಂಟುಮಾಡುತ್ತದೆ. ಈ ಘರ್ಷಣೆಯು ಚರ್ಮವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ಗಾಯಗಳು ಅಥವಾ ಹುಣ್ಣುಗಳನ್ನು ಉಂಟುಮಾಡಬಹುದು. ಇವುಗಳಿಗೆ ಚಿಕಿತ್ಸೆ ನೀಡದೆ ಹಾಗೇ ಬಿಟ್ಟರೆ ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಅಪಾಯವಿದೆ. ಹೀಗಾಗಿ ಚರ್ಮದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಚರ್ಮದ ಕಿರಿಕಿರಿಯನ್ನು ತಪ್ಪಿಸಲು ಸಡಿಲವಾದ ಸ್ಕರ್ಟ್‌ಗಳನ್ನು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.