newsics.com
ಗುಜರಾತ್: ನಕಲಿ ಕೋರ್ಟ್ ಸ್ಥಾಪಿಸಿ ಪ್ರಕರಣಗಳ ತೀರ್ಪು ನೀಡುತ್ತಿದ್ದ ಖೊಟ್ಟಿ ನ್ಯಾಯಾಧೀಶನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?:2019ರಲ್ಲಿ ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ನಕಲಿ ಜಡ್ಜ್ ಮೋರಿಸ್ ಸ್ಯಾಮ್ಯುಯೆಲ್ ಕಕ್ಷಿದಾರರೊಬ್ಬರ ಪರವಾಗಿ ತೀರ್ಪು ನೀಡಿ, ಭೂ ಕಂದಾಯ ದಾಖಲೆಗಳಲ್ಲಿ ಆ ಕಕ್ಷಿದಾರರ ಹೆಸರನ್ನು ಸೇರಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದ. ಬಳಿಕ ಮತ್ತೊಬ್ಬ ವಕೀಲರ ಮೂಲಕ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಆದೇಶವನ್ನು ಜಾರಿಗೊಳಿಸುವಂತೆ ಕೋರಿದ್ದ. ಸ್ಯಾಮ್ಯುಯೆಲ್ ನೀಡಿದ ನಕಲಿ ಆದೇಶವನ್ನೂ ಅರ್ಜಿಗೆ ಲಗತ್ತಿಸಿದ್ದ. ಸಿಟಿ ಸಿವಿಲ್ ಕೋರ್ಟ್ನಲ್ಲಿ ನಕಲಿ ಆದೇಶದ ಸತ್ಯ ಬೆಳಕಿಗೆ ಬಂದಿದೆ. ಆರೋಪಿ ಸ್ಯಾಮ್ಯುಯೆಲ್ ವಿರುದ್ಧ ಅಹಮದಾಬಾದ್ ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್ ಅವರು ಕಾರಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಪಾಸಣೆ ನಡೆಸಿದಾಗ ಕೋರ್ಟೂ ನಕಲಿ, ಅಲ್ಲಿನ ಜಡ್ಜ್ ಕೂಡ ಕೊಟ್ಟಿ ಎಂಬುದು ಗೊತ್ತಾಗಿದೆ.
ಮೋರಿಸ್ ಸ್ಯಾಮ್ಯುಯೆಲ್ ನಕಲಿ ಟ್ರಿಬ್ಯೂನಲ್ ಸ್ಥಾಪಿಸಿ ನ್ಯಾಯಾಧೀಶನಂತೆ ತೀರ್ಪು ನೀಡುತ್ತಿದ್ದ ಆರೋಪಿ. ಈತನನ್ನು ಪೊಲೀಸರು ಬಂಧಿಸಿ, ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಜೈಲಿಗಟ್ಟಿದ್ದಾರೆ.