newsics.com
ಮುಂಬೈ: ನಟ ಸಲ್ಮಾನ್ ಖಾನ್ ಅವರನ್ನು ಮಹಾರಾಷ್ಟ್ರದ ಪನ್ವೇಲ್ನಲ್ಲಿರುವ ಅವರ ಫಾರ್ಮ್ಹೌಸ್ ಬಳಿ ಹತ್ಯೆ ಮಾಡಲು 25 ಲಕ್ಷ ರೂ. ಸುಪಾರಿ ಪಡೆಯಲಾಗಿತ್ತು ಎಂಬ ಶಾಕಿಂಗ್ ವಿಚಾರ ಮುಂಬೈ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಸಲ್ಮಾನ್ ಖಾನ್ ಹತ್ಯೆ ಯತ್ನ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರದ ನವಿ ಮುಂಬೈ ಪೊಲೀಸರು ಐವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಸಲ್ಮಾನ್ ಹತ್ಯೆಗೆ ಸದ್ಯ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಗ್ಯಾಂಗ್ ಸುಪಾರಿ ಪಡೆದುಕೊಂಡಿದೆ ಎಂದು ಹೇಳಿದೆ.
ಆರೋಪಿಗಳು ಪಾಕಿಸ್ತಾನದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಎಕೆ 47, ಎಕೆ 92 ಮತ್ತು ಎಂ 16 ಮತ್ತು ಟರ್ಕಿ ನಿರ್ಮಿತ ಜಿಗಾನಾ ಆಯುಧವನ್ನು ಖರೀದಿಸಲು ಸಿದ್ಧತೆ ನಡೆಸಿತ್ತು. ಆರೋಪಿಗಳು ಸಲ್ಮಾನ್ ಖಾನ್ ಅವರ ಹತ್ಯೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರನ್ನು ನೇಮಿಸಿಕೊಂಡಿದ್ದಾರೆ. ಅವರೆಲ್ಲರೂ ಪುಣೆ, ರಾಯಗಡ, ನವಿ ಮುಂಬೈ, ಥಾಣೆ ಮತ್ತು ಗುಜರಾತ್ನಲ್ಲಿ ತಲೆಮರೆಸಿಕೊಂಡಿದ್ದಾರೆ.