newsics.com
ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತರು ತಾವು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ದಿಕ್ ರನ್ನು ನಿನ್ನೆ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದು ಸುಪಾರಿ ಹತ್ಯೆ ಎಂದು ಶಂಕಿಸಿರುವ ಪೊಲೀಸರು ಪ್ರಕರಣದ ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಗುಂಡಿನ ದಾಳಿ ಸಂಬಂಧ ಹರ್ಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಮೂರನೆಯವರು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಗುಂಡಿನ ದಾಳಿಗೂ ಮುನ್ನಾ ಮೂವರು ಆರೋಪಿಗಳು ನಿನ್ನೆ ರಾತ್ರಿ ಆಟೋ ರಿಕ್ಷಾದಲ್ಲಿ ಬಂದಿದ್ದು, ಸ್ವಲ್ಪ ಸಮಯ ಕಾಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಸಿದ್ದಿಕ್ ಆಪ್ತರಾಗಿದ್ದರಿಂದ ಹತ್ಯೆಯಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿರುವುದು ಬಲವಾಗಿದೆ. ಸಿದ್ದಿಕ್ ಅವರಿಗೆ 15 ದಿನಗಳ ಹಿಂದೆ ಜೀವ ಬೆದರಿಕೆ ಕರೆ ಬಂದಿದ್ದರಿಂದ ಅವರಿಗೆ ‘ವೈ’ ವರ್ಗದ ಭದ್ರತೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.