newsics.com
ಕಲಬುರಗಿ: ಮದುವೆ ಮಾತುಕತೆ ವಿಚಾರದಲ್ಲಿ ಉಂಟಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಕಲಬುರಗಿ ಹೊರವಲಯದ ನಾಗನಹಳ್ಳಿಯಲ್ಲಿ ನಡೆದಿದ್ದು, ಪ್ರೀತಿಸಿದ ಯುವತಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯ ಸುಮಿತ್ ಕೊಲೆಯಾದ ಯುವಕ.
ಸುಮಿತ್ ಸಹೋದರ ಸಚಿನ್ ಮತ್ತು ಉಷಾ ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಉಷಾ ಸಹೋದರ ವರುಣ ಕುಮಾರ ಹಾಗೂ ಇತರರು ಸಚಿನ್ ಮನೆಗೆ ಮದುವೆ ಮಾತುಕತೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ಇರಲಿಲ್ಲ. ಸುಮಿತ್ ಮತ್ತು ಪೋಷಕರು ಮನೆಯಲ್ಲಿದ್ದರು. ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಸುಮಿತ್ಗೆ ಚಾಕುವಿನಿಂದ ಇರಿದಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಸುಮಿತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರೀತಿಸಿದ ಯುವತಿ ಉಷಾ, ಆಕೆಯ ಸಹೋದರ ವರುಣಕುಮಾರ, ತಂದೆ ರಾಜಕುಮಾರ, ತಾಯಿ ಜಯಮ್ಮ, ವರುಣ ಕುಮಾರನ ಸ್ನೇಹಿತರಾದ ಸಿದ್ದು, ಪ್ರಜ್ವಲ್ ಅವರನ್ನು ಬಂಧಿಸಿದ್ದಾರೆ. ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಎಸ್. ಶರಣಪ್ಪ ತಿಳಿಸಿದ್ದಾರೆ.