newsics.com
ನವದೆಹಲಿ: ಬ್ಯಾಂಕ್ ಅಕೌಂಟ್ ತೆರೆಯುವುದರಿಂದ ಹಿಡಿದು ಹಲವು ಹಣಕಾಸು ಕಾರ್ಯಗಳಿಗೆ ಪ್ಯಾನ್ ಅವಶ್ಯಕವಾಗಿ ಬೇಕಾಗುತ್ತದೆ. ದೇಶದ ಗುರುತು ದಾಖಲೆಗಳಲ್ಲೂ ಅದು ಒಂದೆನಿಸಿದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಹಲವು ಜನರು ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದಿರಬಹುದು. ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಒಂದು ಪ್ಯಾನ್ ನಂಬರ್ ಮಾತ್ರವೇ ಬಳಸಬಹುದು.
ಕ್ರೆಡಿಟ್ ಕಾರ್ಡ್‌ಗಳ ಗಾತ್ರದಲ್ಲಿ ಇರುವ ಪ್ಯಾನ್ ಕಾರ್ಡ್ ನಲ್ಲಿ ವ್ಯಕ್ತಿಯ ಹೆಸರು, ಭಾವಚಿತ್ರ, ಜನ್ಮದಿನಾಂಕ ಮತ್ತು ಪರ್ಮನೆಂಟ್ ಅಕೌಂಟ್ ನಂಬರ್ ನಮೂದಾಗಿರುತ್ತದೆ. 12 ಅಕ್ಷರ ಮತ್ತು ಅಂಕಿಗಳ ಸಂಯೋಜನೆ ಸಂಖ್ಯೆ ಇರುತ್ತದೆ. ಪ್ಯಾನ್ ನಂಬರ್ ಎಂದರೆ ಇದೇ ಸಂಖ್ಯೆಯೇ. ವ್ಯಕ್ತಿಯ ಹೆಸರಲ್ಲಿ ಎಷ್ಟು ಬ್ಯಾಂಕ್ ಖಾತೆಗಳಿವೆ, ಠೇವಣಿಗಳಿವೆ, ಸಾಲಗಳಿವೆ, ಹೂಡಿಕೆಗಳಿವೆ ಇತ್ಯಾದಿ ಸಮಗ್ರ ಮಾಹಿತಿಯನ್ನು ಪ್ಯಾನ್ ನಂಬರ್ ಮೂಲಕ ಟ್ರ್ಯಾಕ್ ಮಾಡಬಹುದು. ಈ ಕಾರಣಕ್ಕೆ ಪ್ಯಾನ್ ಬಹಳ ಅವಶ್ಯಕ ದಾಖಲೆ ಎನಿಸಿದೆ.
ಮೊದಲೇ ಹೇಳಿದಂತೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದುವಂತಿಲ್ಲ. ಎರಡು ಮತ್ತು ಹೆಚ್ಚು ಪ್ಯಾನ್ ನಂಬರ್ ಹೊಂದಿರುವುದು ಆದಾಯ ತೆರಿಗೆ ಕಾಯ್ದೆಯ ಉಲ್ಲಂಘನೆ ಆಗುತ್ತದೆ. ಈ ರೀತಿಯ ಅಕ್ರಮ ಕಂಡು ಬಂದಲ್ಲಿ ಆದಾಯ ತೆರಿಗೆ ಇಲಾಖೆ 272ಬಿ ಸೆಕ್ಷನ್ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದು. ಈ ಕಾಯ್ದೆ ಪ್ರಕಾರ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವ ವ್ಯಕ್ತಿಗೆ 10,000 ರೂ ದಂಡ ವಿಧಿಸಬಹುದು.