newsics.com
ಲಕ್ನೋ: ರೈಲ್ವೆ ಟ್ರ್ಯಾಕ್‌ನಲ್ಲಿ ರೀಲ್ಸ್ ಮಾಡಲು ಹೋದ ತಂದೆ, ತಾಯಿ, ಮಗ ಸಾವಿನ ಮನೆ ಸೇರಿದ್ದಾರೆ.
ಉತ್ತರ ಪ್ರದೇಶ ಲಖೀಂಪುರ ಖೇರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ದಂಪತಿ ತಾವು ಸಾಯುವುದಲ್ಲದೇ ಇವರಿಬ್ಬರ ಮೂರ್ಖತನಕ್ಕೆ ಏನೂ ಅರಿಯದ 2 ವರ್ಷದ ಮಗು ಕೂಡ ಸಾವನ್ನಪ್ಪಿದೆ.
26 ವರ್ಷದ ಮೊಹಮ್ಮದ್ ಅಹ್ಮದ್, 24 ವರ್ಷದ ನಜ್ನೀನ್ ಹಾಗೂ ಇವರ ಎರಡು ವರ್ಷದ ಮಗ ಅಕ್ರಂ ರೈಲಿಗೆ ಸಿಲುಕಿ ಮೃತಪಟ್ಟವರು.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಕ್ಕಾಗಿ ಈ ಜೋಡಿ ರೈಲ್ವೆ ಟ್ರ್ಯಾಕ್‌ನ ಮೇಲೆ ನಿಂತು ರೀಲ್ಸ್ ಮಾಡಿದ್ದಾರೆ. ಈ ವೇಳೆ ರೈಲು ಬರುವುದನ್ನು ಗಮನಿಸದೇ ಹಳಿಯ ಮೇಲೆ ಇವರು ಸ್ಟಕ್ ಆಗಿದ್ದು, ವೇಗವಾಗಿ ಬಂದ ಪ್ಯಾಸೆಂಜರ್ ರೈಲು ಇವರ ಮೇಲೆ ಹರಿದಿದೆ.
ಈ ದಂಪತಿ ಸೀತಾಪುರ ಜಿಲ್ಲೆಗೆ ಸಮೀಪವಿರುವ ಲಹರ್‌ಪುರ ನಿವಾಸಿಗಳಾಗಿದ್ದು, ಹರಗಾಂವ್ ಗ್ರಾಮದ ಕ್ಯೋಟಿ ಗ್ರಾಮದಲ್ಲಿದ್ದ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿಸಿ ವಾಪಸ್ ಬರುವ ವೇಳೆ, ಓಲೇ – ಲಖೀಂಪುರ ಬಳಿ ಇರುವ ರೈಲ್ವೆ ಬ್ರಿಡ್ಜ್ ಕೆಳಗೆ ತಮ್ಮ ಬೈಕ್ ಪಾರ್ಕ್ ಮಾಡಿ, ರೈಲ್ವೆ ಟ್ರ್ಯಾಕ್‌ಗೆ ಬಂದು ರೀಲ್ಸ್ ಮಾಡುತ್ತಿದ್ದಾಗ ಲಕ್ನೋದಿಂದ ಮಿಲಾನಿಗೆ ಹೋಗುತ್ತಿದ್ದ ರೈಲು ಅವರ ಮೇಲೆ ಹರಿದಿದೆ.
ರೈಲು ಬರುತ್ತಿರುವುದನ್ನು ಕೊನೇ ಕ್ಷಣದಲ್ಲಿ ಗಮನಿಸಿದ ದಂಪತಿ ಹಳಿಯಿಂದ ಬೇರೆಡೆಗೆ ಓಡಲು ಯತ್ನಿಸಿದರೂ ಅಷ್ಟರಲ್ಲಾಗಲೇ ರೈಲು ಇವರ ಬಳಿ ಬಂದಾಗಿತ್ತು.