newsics.com
ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಎಂಬುವುದು ಎಂದಿಗೂ ಪರಿಹರಿಸಲಾದ ಸಮಸ್ಯೆಯಾಗಿ ಉಳಿದುಬಿಟ್ಟಿದೆ. ಇದೀಗ ನಗರ ವಾಸಿಗಳಿಗೆ ರಸ್ತೆ ಗುಂಡಿಗಳ ಬಗ್ಗೆ ದೂರು ನೀಡಲು ಬಿಬಿಎಂಪಿ ಗಮನ ಆಪ್ ಅನ್ನು ಬಿಡುಗಡೆ ಮಾಡಿದೆ. ಜೊತೆಗೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಗಳನ್ನು ನಿರ್ವಹಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ.
ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಬಿಬಿಎಂಪಿ, ಪಾಲಿಕೆ ವ್ಯಾಪ್ತಿಯಲ್ಲಿನ ಗುಂಡಿಗಳ ಬಗ್ಗೆ ಸಾರ್ವಜನಿಕರು, ನಾಗರೀಕರಿಂದ ದೂರುಗಳನ್ನು ದಾಖಲಿಸಲು ಹಾಗೂ ಸದರಿ ದೂರುಗಳನ್ನು ಸಂಬಂಧಪಟ್ಟ ಅಭಿಯಂತರರು ಬಗೆಹರಿಸಲು ಅನುಗುಣವಾಗುವಂತೆ ರಸ್ತೆ ಗುಂಡಿ ಗಮನ ಎಂಬ ಆಪ್ ಬಿಡುಗಡೆ ಮಾಡಲಾಗಿದೆ.
ಈ ಆಪ್‌ನಲ್ಲಿ ಸಾರ್ವಜನಿಕರು, ಆನ್‌ಲೈನ್ ಮೂಲಕ ರಸ್ತೆ ಗುಂಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದಾಖಲಿಸಿ, ನಂತರ ದೂರಿಗೆ ಸಂಬಂಧಪಟ್ಟ ಅಭಿಯಂತರರು ಸೂಕ್ತ ಕ್ರಮ ಕೈಗೊಂಡು, ಈ ದೂರಿನ ಸ್ಥಿತಿಗತಿಯ ಬಗ್ಗೆ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ.
ದಾಖಲಾದ ದೂರುಗಳನ್ನು ಪರಿಶೀಲಿಸಲು ರಸ್ತೆ ಗುಂಡಿ ಗಮನ ಆಪ್‌ನಲ್ಲಿ ಅಪ್‌ಲೋಡ್ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ತಮ್ಮ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಪರಿಶೀಲಿಸಿ, ದಾಖಲಾಗುವ ದೂರುಗಳು ಹಾಗೂ ರಸ್ತೆ ಗುಂಡಿಗಳನ್ನು ಪ್ರತಿ ದಿನ ಪರಿಶೀಲಿಸಿ, ದಾಖಲಿಸಿ, ಸಾರ್ವಜನಿಕರಿಗೆ ಅಡಚಣೆಯಾಗದಂತೆ ಡಾಂಬರೀಕರಣ ಮಾಡಬೇಕು. ಈ ದೂರುಗಳನ್ನು ಯಾವುದೇ ಕಾಲ ವಿಳಂಭಕ್ಕೆ ಆಸ್ಪದ ಕೊಡದೆ ಪರಿಹರಿಸಲು ಹಾಗೂ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲು ಕ್ರಮ ವಹಿಸಲು ಸೂಚಿಸಿದೆ.