newsics.com
ಬೆಂಗಳೂರು: ಬೆಂಗಳೂರು ರೈಲ್ವೆ ವ್ಯಾಪ್ತಿಯ 108 ನಿಲ್ದಾಣಗಳಲ್ಲಿ ಇನ್ನುಮುಂದೆ ಆನ್ಲೈನ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಖರೀದಿಸಿ ಪ್ರಯಾಣ ಮಾಡಬಹುದಾಗಿದೆ. ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ಸ್ಟೇಷನ್, ಎಸ್ಎಂವಿಟಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸೇರಿದಂತೆ ಬೆಂಗಳೂರು ವ್ಯಾಪ್ತಿಯ ಎಲ್ಲಾ ರೈಲ್ವೆ ಸ್ಟೇಷನ್ಗಳಲ್ಲೂ ಕ್ಯೂಆರ್ ಕೋಡ್ಗಳನ್ನು ಅಳವಡಿಸಲಾಗಿದೆ.
ಪ್ರಯಾಣಿಕರು ಇನ್ನು ಮುಂದೆ ರೈಲು ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾಯಬೇಕಿಲ್ಲ. ಟಿಕೆಟ್ ಕೌಂಟರ್‌ಗಳಲ್ಲಿ ಚಿಲ್ಲರೆ ಸಮಸ್ಯೆಯೂ ಉಧ್ಬವಿಸಲ್ಲ. ಎಲ್ಲದಕ್ಕೂ ಪರಿಹಾರ ಎಂಬಂತೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಬೆಂಗಳೂರು ರೈಲ್ವೆ ವ್ಯಾಪ್ತಿಯಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ಬಂದಿದ್ದು, ಹೊಸ ವ್ಯವಸ್ಥೆಗೆ ಪ್ರಯಾಣಿಕರು ಖುಷಿಯಾಗಿದ್ದಾರೆ.
140 ಯುಟಿಎಸ್ (ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಂ) ಕೌಂಟರ್ಗಳಲ್ಲಿ ಹೊಸ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಾಮಾನ್ಯ ದರ್ಜೆಯ ಟಿಕೆಟ್ ಮೊತ್ತದ ಪಾವತಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆ ತರಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿ ತ್ರಿನೇತ್ರಾ ತಿಳಿಸಿದ್ದಾರೆ.