newsics.com
ಸಂಯುಕ್ತ ಜನತಾದಳದ ಹಿರಿಯ ನಾಯಕ ಕೆಸಿ ತ್ಯಾಗಿ ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಾಯಕತ್ವಕ್ಕೆ ಬರೆದ ಪತ್ರದಲ್ಲಿ ತ್ಯಾಗಿ ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಇತ್ತೀಚೆಗೆ ವಿವಿಧ ವಿಷಯಗಳ ಕುರಿತು ಅವರು ನೀಡಿರುವ ಹೇಳಿಕೆಗಳಿಂದ ನಾಯಕತ್ವದ ಅಸಮಾಧಾನಗೊಂಡಿತ್ತು ಈ ಹಿನ್ನೆಲೆ ರಾಜೀನಾಮೆ ನೀಡಲಾಗಿದೆ ಎಂದು ಮೂಲಗಳು ಸೂಚಿಸಿವೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಹೊಸ ರಾಷ್ಟ್ರೀಯ ವಕ್ತಾರರಾಗಿ ರಾಜೀವ್ ರಂಜನ್ ಪ್ರಸಾದ್ ಅವರು ತ್ಯಾಗಿ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆ ಮತ್ತು ಲ್ಯಾಟರಲ್ ಎಂಟ್ರಿ ವಿವಾದ ಸೇರಿದಂತೆ ಅವರ ಇತ್ತೀಚಿನ ಹೇಳಿಕೆಗಳು ಪಕ್ಷದ ನಿಲುವಿಗಿಂತ ಭಿನ್ನವಾಗಿತ್ತು.
ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದ್ದರು ಮತ್ತು ಗಾಜಾದಲ್ಲಿ ಶಾಂತಿ ಮತ್ತು ಕದನ ವಿರಾಮವನ್ನು ಭಾರತ ಬೆಂಬಲಿಸುತ್ತದೆ ಎಂದು ಹೇಳಿಕೆ ನೀಡಿದ್ದರು. ತ್ಯಾಗಿ ಅವರು ನಾಯಕರನ್ನು ಸಂಪರ್ಕಿಸದೆ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಅವರ ಹೇಳಿಕೆಗಳಿಂದಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ (ಎನ್‌ಡಿಎ) ಭಿನ್ನಾಭಿಪ್ರಾಯಗಳ ಬಗ್ಗೆ ಮಾತುಕತೆ ನಡೆದಿತ್ತು.