newsics.com
ಪ್ಯಾರಿಸ್: ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ (Aman Sehrawat) 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಪ್ಯಾರಿಸ್ ಕ್ರೀಡಾಕೂಟದ 14 ನೇ ದಿನದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮನ್ ಪೋರ್ಟೊ ರಿಕೊದ ಕುಸ್ತಿಪಟು ಡೇರಿಯನ್ ಕ್ರೂಜ್ ಅವರ ಮಣಿಸಿ ಕಂಚು ಗೆದ್ದಿದ್ದಾರೆ.
ಇದು ಭಾರತಕ್ಕೆ ಈ ಒಲಿಂಪಿಕ್ಸ್ನಲ್ಲಿ ಸಿಕ್ಕ 6ನೇ ಪದಕವಾಗಿದೆ. ಈಗಾಗಲೇ ಶೂಟಿಂಗ್ನಲ್ಲಿ 3 ಕಂಚು, ಹಾಕಿಯಲ್ಲಿ ಒಂದು ಕಂಚು, ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಭಾರತಕ್ಕೆ ದಕ್ಕಿದೆ.
21 ವರ್ಷದ ಅಮನ್ ಪ್ಯಾರಿಸ್ ಒಲಿಂಪಿಕ್ಸ್ ಅನ್ನು ಅದ್ಭುತವಾಗಿ ಆರಂಭಿಸಿದ್ದರು. ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಅವರು ಸತತ ಎರಡು ಪಂದ್ಯಗಳನ್ನು ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ ನಾಲ್ಕರ್ ಘಟ್ಟದಲ್ಲಿ ಜಪಾನ್‌ನ ರೀ ಹಿಗುಚಿ ವಿರುದ್ಧ ಸೋಲು ಕಂಡು ಮೊದಲ ಪ್ರಯತ್ನದಲ್ಲೇ ಫೈನಲ್ ಪ್ರವೇಶಿಸುವುದರಿಂದ ತಪ್ಪಿಸಿಕೊಂಡಿದ್ದರು. ಆದರೆ ರಪೆಶಾಜ್ ಸುತ್ತಿನಲ್ಲಿ ಗೆದ್ದು ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ. ಈ ಮೂಲಕ ಕುಸ್ತಿಯಲ್ಲಿ 2008ರಿಂದ ಸತತ 5ನೇ ಒಲಿಂಪಿಕ್ಸ್ನಲ್ಲಿ ಪದಕ ಸಿಕ್ಕಂತಾಗಿದೆ.
ಸೆಮಿಫೈನಲ್ನಲ್ಲಿ ಜಪಾನ್‌ನ ಹಿಗುಚಿ ರೇ ವಿರುದ್ಧ 10-0 ಅಂತರದಿಂದ ಹೀನಾಯ ಸೋಲನುಭವಿಸಿದ ಅಮನ್, ಇಂದಿನ ಪಂದ್ಯದಲ್ಲಿ 13-5ರಲ್ಲಿ ಪೋರ್ಟೊ ರಿಕನ್ ರೆಸ್ಲರ್ ವಿರುದ್ಧ ಪ್ರಾಬಲ್ಯ ಸಾಧಿಸಿ ಗೆದ್ದರು.
ಹಾಕಿಯನ್ನು ಹೊರತುಪಡಿಸಿದರೆ ಭಾರತಕ್ಕೆ ಕುಸ್ತಿ ಒಲಿಂಪಿಕ್ ಪದಕವನ್ನು ಗೆದ್ದ ಮೊದಲ ಕ್ರೀಡೆಯಾಗಿದೆ. ಕೆಡಿ ಜಾಧವ್ ಅವರು 1956 ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಟ್ಟಿದ್ದರು. ಆ ಮೂಲಕ ದೇಶದ ಸ್ವತಂತ್ರ ಇತಿಹಾಸದಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದರು.
ನಂತರ 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಅದ್ಭುತ ಪ್ರದರ್ಶನ ನೀಡಿ ಪದಕ ಗೆಲ್ಲುವವರೆಗೆ ಈ ಕ್ರೀಡೆಯಿಂದ ಯಾವುದೇ ಪದಕವನ್ನು ಗೆದ್ದಿರಲಿಲ್ಲ. ಅವರು ಪುರುಷರ ಫ್ರೀಸ್ಟೈಲ್ 66 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.
ನಂತರ ಅವರೇ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 66 ಕೆಜಿಯಲ್ಲಿ ಬೆಳ್ಳಿ ಪದಕ ಗೆದ್ದಾಗ ಸತತ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡರು.
ಅದೇ ವರ್ಷ ಯೋಗೇಶ್ವರ್ ದತ್ ಕಂಚು, 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 58 ಕೆಜಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆಲ್ಲುವ ಮೂಲಕ ಈ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಿಕೊಂಡಿದ್ದರು.
ಬಜರಂಗ್ ಪುನಿಯಾ ಮತ್ತು ರವಿ ದಹಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಇದೀಗ ಪ್ಯಾರಿಸ್ನಲ್ಲಿ ಕಂಚು ಗೆಲ್ಲುವ ಮೂಲಕ ಕುಸ್ತಿಯಲ್ಲಿ ಪದಕ ಗೆದ್ದ ಭಾರತದ 8ನೇ ಕುಸ್ತಿಪಟು ಎನಿಸಿಕೊಂಡಿದ್ದಾರೆ.