newsics.com
ವಯನಾಡು(ಕೇರಳ): ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ವೇಳೆ ಪ್ರವಾಹದಿಂದ ತಪ್ಪಿಸಿಕೊಳ್ಳಲು ಕಾಡಿಗೆ ಹೋದ ಅಜ್ಜಿ ಮತ್ತು ಮೊಮ್ಮಗಳನ್ನು ಕಾಡಾನೆಗಳು ರಕ್ಷಿಸಿರುವ ಅಚ್ಚರಿಯ ಘಟನೆ ವರದಿಯಾಗಿದೆ.
ದೇವರನಾಡು ಕೇರಳದ ಹಚ್ಚ ಹಸಿರಿನಿಂದ ಪ್ರವಾಸಿಗರನ್ನು ಸೆಳೆಯುತ್ತಿದ್ದ ವಯನಾಡು ಕಳೆದ ವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ.

ಜುಲೈ 30ರಂದು ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿದ್ದು, ಅವಶೇಷಗಳಡಿಯಲ್ಲಿ ಇನ್ನೂ ನೂರಾರು ಮಂದಿ ಸಿಲುಕಿದ್ದಾರೆ.
ಇದೇ ವಯನಾಡಿನಲ್ಲಿ ಪ್ರವಾಹದಿಂದ ಕಾಡಿಗೆ ಓಡಿ ಬಂದಿದ್ದ ಅಜ್ಜಿ ಮತ್ತು ಮೊಮ್ಮಗಳನ್ನು ಅಲ್ಲಿನ ಕುಖ್ಯಾತ ಕಾಡಾನೆ ‘ಕೊಂಬನ್’ ಮತ್ತು ತಂಡ ರಕ್ಷಣೆ ಮಾಡಿದ ಘಟನೆ ವರದಿಯಾಗಿದೆ.
ಕೇರಳದ ಸ್ಥಳೀಯ ಮಾಧ್ಯಮದಲ್ಲಿ ವರದಿಯಾದ ಅಜ್ಜಿ, ಮೊಮ್ಮಗಳ ಈ ಕಥೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್
ಮುಂಡಕೈನ ನಿವಾಸಿ ಟೀ ಎಸ್ಟೇಟ್‌ನ ಕೆಲಸಗಾರ್ತಿಯಾದ ಸುಜಾತ ಎಂಬ ವೃದ್ಧೆ ತನ್ನ ಮೊಮ್ಮಗಳೊಂದಿಗೆ ಜುಲೈ 30ರಂದು ಮನೆಯಲ್ಲಿದ್ದಾಗ ರಾತ್ರಿ ಭಾರಿ ಮಳೆ ನಡುವೆ ದೊಡ್ಡ ಶಬ್ದ ಕೇಳಿಬಂದಿದೆ. ಈ ವೇಳೆ ಎಚ್ಚೆತ್ತ ಅಜ್ಜಿ ಮನೆಯಿಂದ ಹೊರಗೆ ನೋಡಿದಾಗ ಪ್ರವಾಹದ ನೀರು ಇಡೀ ಊರನ್ನು ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ನೋಡಿದ್ದಾರೆ. ಕೂಡಲೇ ಅಜ್ಜಿ ಉಟ್ಟ ಬಟ್ಟೆಯೊಡನೆ ತಮ್ಮ ಮೊಮ್ಮಗಳೊಂದಿಗೆ ಎತ್ತರದ ಕಾಡಿನ ಪ್ರದೇಶಕ್ಕೆ ಓಡಿದ್ದಾರೆ.
ಕಾಡಿನಲ್ಲಿ ಅವರಿಗೆ ಕೇರಳದ ಕುಖ್ಯಾತ ”ಕೊಂಬನ್” ಆನೆ ಮತ್ತು ತಂಡ ಎದುರಾಗಿದೆ. ಆನೆಯನ್ನು ಕಂಡ ಕೂಡಲೇ ಕಣ್ಣೀರು ಹಾಕಿದ ವೃದ್ಧೆ ಸುಜಾತ ತನ್ನ ಮನೆ-ಆಸ್ತಿ ಸರ್ವಸ್ವವನ್ನೂ ಕಳೆದುಕೊಂಡಿದ್ದೇನೆ. ನಮ್ಮನ್ನು ಏನೂ ಮಾಡಬೇಡ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.
ಅಚ್ಚರಿ ಎಂದರೆ ಕಾಡಾನೆ ಕೊಂಬನ್ ಮತ್ತು ತಂಡ ಈ ವೇಳೆ ಅಜ್ಜಿ ಮತ್ತು ಮೊಮ್ಮಗಳಿಗೆ ಏನೂ ಮಾಡಿಲ್ಲ. ಅಲ್ಲದೆ ಬೆಳಗಿನ ಜಾವದವರೆಗೂ ಅವರಿರುವ ಸ್ಥಳದಲ್ಲೇ ಇದ್ದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಹೊರಟು ಹೋಗಿವೆ. ಬಳಿಕ ರಕ್ಷಣಾ ತಂಡ ಬಂದು ಸುಜಾತ ಮತ್ತು ಅವರ ಮೊಮ್ಮಗಳನ್ನು ರಕ್ಷಣೆ ಮಾಡಿವೆ.
ಮೂರು ಆನೆ ಆ ಬೆಟ್ಟದಲ್ಲಿತ್ತು. ನಮ್ಮ ಬಳಿ ನಿಂತಿದ್ದು ಗಂಡಾನೆ. ಅಲ್ಲಿದ್ದದ್ದು ನಾನು ಮತ್ತು ಮೊಮ್ಮಗಳು ಮಾತ್ರ. ಮಗಳು ಗಾಯವಾಗಿ ಕಾಫಿ ತೋಟದಲ್ಲಿ ಮಲಗಿದ್ದಳು. ಅಳಿಯ ಬಾಕಿ ಉಳಿದವರನ್ನು ಕಾಪಾಡಲು ಓಡುತ್ತಿದ್ದ. ಪ್ರಾಣಾಪಾಯವೇನೂ ಸಂಭವಿಸಿಲ್ಲ. ನನ್ನ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ತನಗಾದ ಅನುಭವ ಹಂಚಿಕೊಂಡಿದ್ದಾರೆ.
ಯಾದಗಿರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಠಾತ್ ಸಾವು: ಶಾಸಕರೇ ಕಾರಣ ಎಂದ ಸಾರ್ವಜನಿಕರು, ಆಂಬುಲೆನ್ಸ್ ತಡೆದು ಆಕ್ರೋಶ