newsics.com
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ, ಭಾರತ ತಂಡದ ಮಾಜಿ ಕೋಚ್ ಅನ್ಶುಮನ್ ಗಾಯಕ್ವಾಡ್ ಬುಧವಾರ ಬರೋಡಾದಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಕಳೆದ ಹಲವು ದಿನಗಳಿಂದ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅನ್ಶುಮನ್, ಚಿಕಿತ್ಸೆಗಾಗಿ ಲಂಡನ್ಗೆ ತೆರಳಿದ್ದರು. ಕಳೆದ ತಿಂಗಳಷ್ಟೇ ಅವರು ತಮ್ಮ ತವರೂರು ಬರೋಡಾಕ್ಕೆ ವಾಪಸಾಗಿ ಚಿಕಿತ್ಸೆ ಮುಂದುವರಿಸಿದ್ದರು.
ಗಾಯಕ್ವಾಡ್ ಅವರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಮಾಜಿ ಕ್ರಿಕೆಟಿಗರು ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಬಿಸಿಸಿಐ 1 ಕೋಟಿ ರು. ನೆರವು ಬಿಡುಗಡೆ ಮಾಡಿತ್ತು.
ಭಾರತ ಪರ 40 ಟೆಸ್ಟ್, 15 ಏಕದಿನ ಪಂದ್ಯಗಳನ್ನು ಆಡಿದ್ದ ಗಾಯಕ್ವಾಡ್, ಒಟ್ಟಾರೆ 22 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 205 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 12,136 ರನ್ ಕಲೆಹಾಕಿದ್ದರು.
ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾಗಿದ್ದ ಅನ್ಶುಮನ್ ಗಾಯಕ್ವಾಡ್ 1974-75ರ ಅವಧಿಯಲ್ಲಿ ಹಲವಾರು ಬಾರಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಜತೆ ಇನಿಂಗ್ಸ್ ಆರಂಭಿಸಿದ್ದಾರೆ.
ಜಲಂದರ್ನಲ್ಲಿ ನಡೆದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಅನ್ಶುಮನ್ ಗಾಯಕ್ವಾಡ್ ದ್ವಿಶತಕ ಸಿಡಿಸಿದ್ದರು. ಇದು ಆ ಕಾಲದಲ್ಲಿ ದಾಖಲಾದ ಅತಿ ಮಂದಗತಿಯ ಟೆಸ್ಟ್ ದ್ವಿಶತಕ ಎನಿಸಿತ್ತು.
ಶಾರ್ಜಾದಲ್ಲಿ ಸಚಿನ್ ತೆಂಡುಲ್ಕರ್ 1998ರಲ್ಲಿ ಅವಿಸ್ಮರಣೀಯ ಇನ್ನಿಂಗ್ಸ್ಗಳನ್ನು ಆಡಿದಾಗ, 1999ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ಇನ್ನಿಂಗ್ಸ್ನಲ್ಲಿ 10 ವಿಕೆಟ್ ಕಬಳಿಸಿದಾಗ, ಗಾಯಕ್ವಾಡ್ ಅವರು ಭಾರತ ತಂಡದ ಕೋಚ್ ಆಗಿದ್ದರು.
ಭಾರತದ ಮತ್ತೋರ್ವ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದು ಕೂಡಾ ಇದೇ ಗಾಯಕ್ವಾಡ್ ಟೀಂ ಇಂಡಿಯಾ ಕೋಚ್ ಆಗಿದ್ದಾಗ.
ಮುಡಾ ಹಗರಣ: ಸಿಎಂ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅನುಮತಿ ಸಾಧ್ಯತೆ, ಸಂಕಷ್ಟದಲ್ಲಿ ಸಿದ್ದರಾಮಯ್ಯ
ಕೂಡುಮಲೆ ದೇಗುಲಕ್ಕೆ ನುಗ್ಗಿದ ಮಳೆ ನೀರು: ಹುಂಡಿಗೆ ಹಾಕಿದ್ದ ಕಾಣಿಕೆ ಹಣ ನೀರುಪಾಲು