newsics.com
ಬೆಂಗಳೂರು: ನೂರು ರೂ ಆಸುಪಾಸಿನಲ್ಲಿರುವ ಟೊಮೆಟೋ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸರ್ಕಾರ ಸಬ್ಸಿಡಿ ದರದಲ್ಲಿ ಆ ಹಣ್ಣು ಮಾರುತ್ತಿದೆ.
ಮೊದಲಿಗೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎನ್ಸಿಸಿಎಫ್ನ ರೀಟೇಲ್ ಸ್ಟೋರ್ ಮತ್ತು ವಾಹನಗಳ ಮೂಲಕ ಟೊಮೆಟೋ ಮಾರಾಟ ನಡೆಯಲಿದೆ. ಕಿಲೋಗೆ 60 ರೂಗೆ ಈ ಹಣ್ಣು ಸಿಗಲಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಇಂದು ಸೋಮವಾರ ಈ ಯೋಜನೆಗೆ ಚಾಲನೆ ನೀಡಿದರು.
ಇನ್ನೊಂದು ವಾರ ಅಥವಾ ಹತ್ತು ದಿನದಲ್ಲಿ ಟೊಮೆಟೋ ಬೆಲೆ ಕಡಿಮೆಗೊಳ್ಳುತ್ತದೆ ಎಂದು ಜೋಷಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೊಮೆಟೋ ಬೆಲೆ 70 ರೂಗಿಂತ ಮೇಲೇರಿದೆ. ದೆಹಲಿ ಮೊದಲಾದ ಕೆಲವೆಡೆಯಂತೆ ಬೆಲೆ 120 ರೂವರೆಗೂ ಹೋಗಿದೆ. ಹಣದುಬ್ಬರ ಇಳಿಸುವ ಗುರಿಗೆ ಇದು ತಡೆಯಾಗುವುದರಿಂದ ಸರ್ಕಾರ ಈ ಬೆಲೆ ಏರಿಕೆಗೆ ಕಡಿವಾಣ ಹಾಕುವುದು ಅನಿವಾರ್ಯ. ಕೇಂದ್ರ ಸರ್ಕಾರ ಸ್ಥಾಪಿಸಿರುವ ಬೆಲೆ ಸ್ಥಿರತೆ ನಿಧಿಯನ್ನು (ಪಿಎಸ್ಎಫ್) ಬಳಸಿ ಮಂಡಿಗಳಿಂದ ಟೊಮೆಟೋ ಖರೀದಿಸಿ ವಿವಿಧ ಕಡೆ ಮಾರಾಟ ಮಾಡುವ ಪ್ರಯತ್ನ ಮಾಡಲಾಗಿದೆ.