newsics.com
ಮಾನವ ವಾಸಕ್ಕೆ ಯೋಗ್ಯವಾಗಿರುವ ಏಕೈಕ ಗ್ರಹವೆಂದರೆ ಅದು ಭೂಮಿ. ಈ ಗ್ರಹ ಬಿಟ್ಟರೆ ಸೌರಮಂಡಲದ ಯಾವುದೇ ಗ್ರಹದಲ್ಲಿ ಜೀವಿಗಳು ಬದುಕಲು ಸಾಧ್ಯವಿಲ್ಲ. ಈ ಭೂಮಿ ಬಗ್ಗೆ ಸದ್ಯ ಆತಂಕಕಾರಿ ವಿಚಾರವನ್ನು ಹೊರಬಂದಿದೆ.
ಭೂಮಿಯು ತನ್ನ ಸುತ್ತಲೂ ತಿರುಗುವ ಮೂಲಕ ಸೂರ್ಯನ ಸುತ್ತಲೂ ಗಿರಕಿ ಹೊಡೆಯುತ್ತದೆ. 24 ಗಂಟೆ ಅವಧಿಗೆ ಒಂದು ದಿನ ಎಂದು ಅಂದಾಜಿಸುತ್ತೇವೆ. ಅಂದರೆ, ಭೂಮಿಯು ತನ್ನ ಅಕ್ಷದ ಮೇಲೆ ಒಂದು ಸುತ್ತು ಪೂರ್ಣಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ನಾವು ದಿನವನ್ನು ಲೆಕ್ಕ ಹಾಕುತ್ತೇವೆ.
1.4 ಬಿಲಿಯನ್ ವರ್ಷಗಳ ಹಿಂದೆ ದಿನಕ್ಕೆ 19 ಗಂಟೆ ಲೆಕ್ಕ ಇತ್ತು. ಅದು ಈಗ 24 ಗಂಟೆವರೆಗೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಸುತ್ತುವ ವೇಗ ಗಣನೀಯವಾಗಿ ಕಡಿಮೆಯಾಗಿದೆ. ಪ್ರತಿ ನೂರು ವರ್ಷಗಳಿಗೊಮ್ಮೆ ದಿನದ ಗಾತ್ರವು 1.8 ಸೆಕೆಂಡುಗಳಷ್ಟು ಹೆಚ್ಚುತ್ತಿದೆ. ಇದು ಮುಂದುವರಿದರೆ, 2100ರ ಇಸವಿ ಹೊತ್ತಿಗೆ, ಇದು ದಿನಕ್ಕೆ 2.2 ಮಿಲಿಸೆಕೆಂಡ್ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ .
ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಧ್ರುವಗಳಲ್ಲಿನ ಮಂಜುಗಡ್ಡೆ ಕರಗುತ್ತಿದೆ. ಇದು ಭೂಮಿಯ ತಿರುಗುವಿಕೆಯ ಮೇಲೆ ಪರಿಣಾಮ ಬೀರಿ, ನಿಧಾನಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
ಭೂಮಿಯ ತಿರುಗುವಿಕೆ ನಿಧಾನವಾಗುತ್ತಿರುವ ಕಾರಣ, ದಿನದ ಅವಧಿಯೂ ಹೆಚ್ಚಾಗುತ್ತಿದೆ. ದಿನದ ಅವಧಿಯಲ್ಲಿ ಸ್ವಲ್ಪ ಹೆಚ್ಚಳವು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ಆದರೆ ಈ ಬದಲಾವಣೆಗಳು ಕ್ರಮೇಣ ಹೆಚ್ಚಾದರೆ ಸಮಸ್ಯೆ ಸೃಷ್ಟಿಯಾಗಲಿದೆ. ಇಂತಹ ಘಟನೆಗಳಿಂದ ಭವಿಷ್ಯದಲ್ಲಿ ದಿನಕ್ಕೆ ಎಷ್ಟು ಗಂಟೆ ಎಂಬ ಪ್ರಶ್ನೆಗೆ ನಾವು 25 ಗಂಟೆ ಎಂದು ಹೇಳಬೇಕಾಗಿ ಬರಬಹುದು.