newsics.com
ಬೆಂಗಳೂರು: ಮದ್ಯ ಸೇವಿಸಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ತಡೆದ ಕಾರಣಕ್ಕೆ ಕೋಪಗೊಂಡು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಎದೆಗೆ ಚಾಕುವಿನಿಂದ ಇರಿದು ಹತ್ಯೆಗೈದಿರುವ ದಾರುಣ ಘಟನೆ ಹೆಬ್ಬಾಳ ಸಮೀಪ ಖಾಸಗಿ ಕಾಲೇಜಿನ ಆವರಣದಲ್ಲಿ ನಡೆದಿದೆ.
ಯಲಹಂಕ ನಿವಾಸಿ ಜೈ ಕಿಶೋರ್ ರೈ (45) ಮೃತ ದುರ್ದೈವಿ. ಬಿ ಎ ಅಂತಿಮ ವರ್ಷದ ವಿದ್ಯಾರ್ಥಿ ಅಸ್ಸಾಂ ಮೂಲದ ಭಾರ್ಗವ್ ಬರ್ಬನ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರ್ಗವ್ ಬಂದಾಗ ಈ ಕೃತ್ಯ ನಡೆದಿದೆ.
ಈ ಗಲಾಟೆ ಬಳಿಕ ಕೋಪದಲ್ಲಿ ಅಲ್ಲಿಂದ ತೆರಳಿದ ಭಾರ್ಗವ್, ಕೆಲ ಹೊತ್ತಿನ ನಂತರ ಅಂಗಡಿಯಲ್ಲಿ ಚಾಕು ಖರೀದಿಸಿ ಮತ್ತೆ ಕಾಲೇಜಿಗೆ ಬಂದು ಗೇಟ್ ಬಳಿ ನಿಂತಿದ್ದ ಸೆಕ್ಯೂರಿಟಿ ಗಾರ್ಡ್ ಕಿಶೋರ್ಗೆ ಏಕಾಏಕಿ ಎದೆಗೆ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದ ಆತಂಕಗೊಂಡ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲೇ ಇದ್ದ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಕೂಡ ರಕ್ಷಣೆಗೆ ಧಾವಿಸುವ ವೇಳೆಗೆ ಕಿಶೋರ್ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.