newsics.com
ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ಮಂಗಳವಾರ ನಡೆದ ಸತ್ಸಂಗದಲ್ಲಿ ಕಾಲ್ತುಳಿತ ಉಂಟಾಗಿ 116 ಜನರು ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.
ಈ ಮಧ್ಯೆ, ಆಸ್ಪತ್ರೆಯಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ರಜನೀಶ್ ಎಂಬ ಪೋಲೀಸ್ ಸಿಬ್ಬಂದಿ ಇಟಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿದ್ದಿದ್ದ ಹೆಣಗಳ ರಾಶಿ ನೋಡಿದ ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಟಾಹ್ ಮೆಡಿಕಲ್ ಕಾಲೇಜಿನಲ್ಲಿ ತುರ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ರಜನೀಶ್ ಮೃತದೇಹಗಳ ರಾಶಿಯನ್ನು ನೋಡಿ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರು ಅವಘರ್‌ನಲ್ಲಿ ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯೂಆರ್‌ಟಿ) ಭಾಗವಾಗಿದ್ದರು. ತುರ್ತು ಕರ್ತವ್ಯಕ್ಕಾಗಿ ಅವರನ್ನು ಆಸ್ಪತ್ರೆಗೆ ಕರೆಸಲಾಗಿತ್ತು. ಆದರೆ, ಅಲ್ಲಿ ಬಿದ್ದಿದ್ದ ಹೆಣಗಳು ಮತ್ತು ಗೋಳಾಡುತ್ತಿದ್ದ ಸಾವಿರಾರು ಜನರನ್ನು ನೋಡಿ ಹೃದಯಾಘಾತಕ್ಕೊಳಗಾಗಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ರಾಸ್ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಮೋದಿಯವರು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಸ್ಥಳೀಯ ಸಂಘಟಕರು ‘ಭೋಲೆ ಬಾಬಾ’ ಕಾರ್ಯಕ್ರಮ ಏರ್ಪಡಿಸಿದ್ದರು. ಕಾರ್ಯಕ್ರಮದ ನಂತರ, ಸತ್ಸಂಗದ ಪ್ರಚಾರಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರನ್ನು ಸ್ಪರ್ಶಿಸಲು ಭಕ್ತ ಸಮೂಹವು ಅವರ ಕಡೆಗೆ ನುಗ್ಗಿತು. ಸ್ವಯಂಸೇವಕರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಈ ಕಾಲ್ತುಳಿತ ಸಂಭವಿಸಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಡಿಜಿ ಆಗ್ರಾ ಅವರ ಅಧ್ಯಕ್ಷತೆಯಲ್ಲಿ ತಂಡವನ್ನು ರಚಿಸಿದ್ದೇವೆ ಮತ್ತು ವಿವರವಾದ ವರದಿಯನ್ನು ನೀಡುವಂತೆ ಕೇಳಿದ್ದೇವೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮೂವರು ರಾಜ್ಯ ಸಚಿವರಾದ ಚೌಧರಿ ಲಕ್ಷ್ಮೀ ನಾರಾಯಣ್, ಸಂದೀಪ್ ಸಿಂಗ್ ಮತ್ತು ಅಸಿಮ್ ಅರುಣ್ ಕೂಡ ಸ್ಥಳದಲ್ಲಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕಾಲೇಜು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಖಾಸಗಿ ಕಾಲೇಜು ಫಸ್ಟ್ ಪಿಯು ವಿದ್ಯಾರ್ಥಿನಿ!