newsics.com
ನವದೆಹಲಿ: ವ್ಯಕ್ತಿಯೊಬ್ಬರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಆನ್ಲೈನ್ನಲ್ಲಿ ಈ ತಿಂಗಳು ಎಷ್ಟು ಬಿಲ್ ಬಂದಿದೆ ಎಂದು ನೋಡಿ ಅದನ್ನು ಕಟ್ಟಲು ಹೇಳಿದ ಮೊತ್ತ ಕೇಳಿ ಅವರು ಆಘಾತಕ್ಕೊಳಗಾಗಿದ್ದಾರೆ.
ಮನೆಗೆ 1 ತಿಂಗಳಿಗೆ 52 ಲಕ್ಷ ರೂ. ಕರೆಂಟ್ ಬಿಲ್ ಬಂದಿತ್ತು.ಇಬ್ಬರೇ ವಾಸಿಸುವ ಮನೆಯಲ್ಲಿ ಪ್ರತಿ ತಿಂಗಳೂ 1 ಸಾವಿರಕ್ಕಿಂತಲೂ ಕಡಿಮೆ ಕರೆಂಟ್ ಬಿಲ್ ಬರುತ್ತಿತ್ತು. ಇದೀಗ ಇಷ್ಟು ದೊಡ್ಡ ಮೊತ್ತ ಹೇಗೆ ಬಂದಿತು ಎಂದು ಮುಜಾಫರ್‌ಪುರ ನಿವಾಸಿ ಹರಿಶಂಕರ್ ಮಣಿಯಾರಿ ದಿಗ್ಭ್ರಮೆಗೊಂಡಿದ್ದಾರೆ.
ಈಗಾಗಲೇ ಬಾಕಿಯಿದ್ದ 500 ರೂ. ವಿದ್ಯುತ್ ಬಿಲ್ ಕಟ್ಟಿದ್ದರೂ ಕರೆಂಟ್ ಸಂಪರ್ಕವನ್ನು ವಾಪಾಸ್ ಕೊಟ್ಟಿಲ್ಲ ಎಂದು ಹರಿಶಂಕರ್ ಅವರು ತಮ್ಮ ಮಗನ ಬಳಿ ಹೇಳಿದ್ದರು. ಹೀಗಾಗಿ, ಆನ್‌ಲೈನ್‌ನಲ್ಲಿ ತಮ್ಮ ವಿದ್ಯುತ್ ಬಿಲ್ ಅನ್ನು ಪರಿಶೀಲಿಸಲು ಹೇಳಿದ್ದರು. ಆಗ ಅವರ ಮನೆಗೆ ಜೂನ್ ತಿಂಗಳ ಕರೆಂಟ್ ಬಿಲ್ 52,43,327 ರೂ. ಬಂದಿದೆ ಎಂದು ನಮೂದಾಗಿತ್ತು.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಜಫರ್‌ಪುರ ವಿದ್ಯುತ್ ಇಲಾಖೆ, ಹಳೆಯ ಅನಲಾಗ್ ಮೀಟರ್‌ಗಳಿಂದ ಹೊಸ ಸ್ಮಾರ್ಟ್ ಮೀಟರ್‌ಗಳಿಗೆ ವರ್ಗಾಯಿಸಿದ ರೀಡಿಂಗ್‌ನಿಂದ ದೋಷ ಸಂಭವಿಸಿರಬಹುದು ಎಂದು ವಿವರಿಸಿದ್ದಾರೆ.
“ಮುಜಾಫರ್‌ಪುರದಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ ಮತ್ತು ರೀಡಿಂಗ್‌ಗಳನ್ನು ವರ್ಗಾಯಿಸುವಾಗ ಈ ವ್ಯತ್ಯಾಸ ಉಂಟಾಗಿರಬಹುದು” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹರಿಶಂಕರ್ ಮಣಿಯಾರಿಗೆ ನೀಡಲಾದ ತಪ್ಪಾದ ಬಿಲ್ ಅನ್ನು ಸರಿಪಡಿಸಲಾಗುವುದು ಮತ್ತು ಅವರ ಮನೆಗೆ ವಿದ್ಯುತ್ ಮರುಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.