newsics.com
ಕೋಲಾರ : ವೀಲಿಂಗ್ ಪುಂಡರ ಹುಚ್ಚಾಟಕ್ಕೆ ಅರ್ಚಕ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ
ಮುಗಿಲು ಮುಟ್ಟಿದೆ.
ಸಾವನ್ನಪ್ಪಿರುವ ಮೃತ ದುರ್ದೈವಿ ಅರ್ಚಕರ ಹೆಸರು ಗೋಪಾಲ್ ರಾವ್. ಇವರು ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿಯಾಗಿದ್ದು, ಆ.21ರ ರಾತ್ರಿ ಅರ್ಚಕರು ಕೋಲಾರ-ಕೆಜಿಎಫ್ ಮುಖ್ಯರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ನಲ್ಲಿ ವೀಲಿಂಗ್ ಮಾಡಿಕೊಂಡು ವೇಗವಾಗಿ ಬಂದ ಪುಂಡ ಹಿಂಬದಿಯಿಂದ ಗುದ್ದಿದ್ದರ ಪರಿಣಾಮ ಗೋಪಾಲ್ ರಾವ್ ಅವರ ತಲೆಗೆ ಗಂಭೀರ ಗಾಯವಾಗಿತ್ತು.
ಬಳಿಕ ಅರ್ಚಕ ಗೋಪಾಲ್ ರಾವ್ ಅವರನ್ನ ತಕ್ಷಣ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಅಲ್ಲಿಂದ ಕೋಲಾರ ಜಿಲ್ಲಾಸ್ಪತ್ರೆಗೆ ಕಳಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ ಮಾಡುವ ವೇಳೆ ಮಾರ್ಗಮಧ್ಯ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬಂದ ಬಂಗಾರಪೇಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಅಕ್ಕ-ಪಕ್ಕದ ಅಂಗಡಿಗಳಲ್ಲಿ ಹಾಕಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಹುಡುಕಾಡಿದ್ದಾರೆ. ಈ ವೇಳೆ ಅರ್ಚಕ ಗೋಪಾಲ್ ರಾವ್ ಅವರು ರಸ್ತೆ ದಾಟಿಕೊಂಡು ಹೋದ ಕೆಲವೇ ಹೊತ್ತಿನಲ್ಲಿ ಬಿಳಿ ಬಣ್ಣದ ಆಕ್ಟೀವಾ ಬೈಕ್ವೊಂದು ವೇಗವಾಗಿ ಹೋಗುವ ದೃಶ್ಯ ಕೂಡ ಸೆರಯಾಗಿದೆ. ಸದ್ಯ ಕೆಲವು ಸ್ಥಳೀಯರು ಹೇಳುವ ಪ್ರಕಾರ ಯುವಕನೊಬ್ಬ ಬೈಕ್ ವೀಲಿಂಗ್ ಮಾಡಿಕೊಂಡು ವೇಗವಾಗಿ ಬಂದು ಪಾದಾಚಾರಿ ಈ ಅರ್ಚಕ ಗೋಪಾಲ್ ರಾವ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಿದ್ದಾರೆ.
ಘಟನೆ ಸಂಬಂಧ ಗೋಪಾಲ್ ರಾವ್ ಅವರ ಕುಟುಂಬಸ್ಥರು ದೂರು ನೀಡಿದ್ದು, ಈ ದೂರಿನ ಮೇರೆಗೆ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಪ್ರತಿಕ್ರೆಯೆ ನೀಡಿರುವ ಪೊಲೀಸರು ವೀಲಿಂಗ್ ಆಗಲಿ ಯಾವುದೇ ರೀತಿ ಘಟನೆ ನಡೆದಿದ್ದರೂ ಅದಕ್ಕೆ ತಕ್ಕಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.