newsics.com/ನ್ಯೂಸಿಕ್ಸ್
ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಭಾರಿ ದುಬಾರಿಯಾಗುತ್ತಿದ್ದು, ಅದರಲ್ಲೂ ಮನೆ ಬಾಡಿಗೆ ಗಗನಕ್ಕೇರುತ್ತಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಬೆಂಗಳೂರಿನಲ್ಲಿ ಮನೆ ಮತ್ತು ಭೂಮಿ ಬೆಲೆಗಳು ಆಗಸಕ್ಕೇರುತ್ತಿದ್ದು, ಇಲ್ಲಿ ಬದುಕು ನಡೆಸುವುದೂ ಕೂಡ ದುಬಾರಿಯಾಗುತ್ತಿದೆ. ಇದರ ನಡುವೆ ಬಾಡಿಗೆ ಮತ್ತು ಮನೆ ಮಾಲೀಕರು-ಬಾಡಿಗೆದಾರರ ನಡುವಿನ ಕಿರಿಕಿರಿಗಳ ಬಗ್ಗೆ ಆಗಾಗ ಆನ್‌ಲೈನ್‌ನಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ದಿಶಾಕಾ ಎಂಬ ಯುವತಿಯೊಬ್ಬರು ತಮ್ಮ ಮನೆ ಮಾಲೀಕರು ತಿಂಗಳಿಗೆ ₹4,000 ಬಾಡಿಗೆ ಏರಿಸಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಮಾಡಿದ ವಿಡಿಯೋ ಒಂದು, ಬೆಂಗಳೂರಿನ ಬಾಡಿಗೆ ಸಮಸ್ಯೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಬೆಂಗಳೂರಿನಲ್ಲಿ ಬಾಡಿಗೆ ಪರಿಸ್ಥಿತಿ ಯಾಕೆ ಇಷ್ಟೊಂದು ಕೆಟ್ಟದಾಗಿದೆ? ನಿಮಗೂ ಇಂಥ ಅನುಭವ ಆಗಿದೆಯಾ?” ಎಂಬ ಶೀರ್ಷಿಕೆಯೊಂದಿಗೆ ದಿಶಾಕಾ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ದಿಶಾಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. ಅವರ ಮಾಲೀಕರು ಮೊದಲು, ‘ನನ್ನ ತಮ್ಮ ಊರಿಗೆ ಬರುತ್ತಿದ್ದಾನೆ, ಹಾಗಾಗಿ ನೀವು ಮನೆ ಖಾಲಿ ಮಾಡಬೇಕು’ ಎಂದು ಹೇಳಿದ್ದಾರೆ. ಆದರೆ, ಆಸುಪಾಸಿನಲ್ಲಿ ಬಾಡಿಗೆ ದರ ಹೆಚ್ಚಾಗಿದ್ದೇ ಇದಕ್ಕೆ ನಿಜವಾದ ಕಾರಣ ಎಂದು ಯುವತಿಗೆ ನಂತರ ತಿಳಿಯಿತು.
ನನ್ನ ಓನರ್ ನನಗೆ ಸುಳ್ಳು ಹೇಳಿದರು. ಇದ್ದಕ್ಕಿದ್ದಂತೆ ತಿಂಗಳಿಗೆ 4 ಸಾವಿರ ರೂಪಾಯಿ ಬಾಡಿಗೆ ಜಾಸ್ತಿ ಮಾಡಿದರು. ಕಾರಣ ಕೇಳಿದ್ದಕ್ಕೆ, ತಮ್ಮ ಊರಿಗೆ ಬರುತ್ತಿದ್ದಾನೆ, ಅವನನ್ನು ಈ ಮನೆಯಲ್ಲಿ ಇರಿಸಬೇಕು ಅಂದರು, ಎಂದು ದಿಶಾಕಾ ವಿಡಿಯೋದಲ್ಲಿ ಹೇಳಿದ್ದಾರೆ.
ನಾನು ವಾಸವಿರುವ ಇಡೀ ಬಿಲ್ಡಿಂಗ್ ಅವರದ್ದೇ. ಆದರೂ ನನ್ನನ್ನೇ ಯಾಕೆ ಖಾಲಿ ಮಾಡಲು ಹೇಳುತ್ತಿದ್ದಾರೆ ಎಂಬ ಅನುಮಾನ ಬಂತು,” ಎಂದು ಅವರು ವಿವರಿಸಿದ್ದಾರೆ. ನಂತರ ಮಾಲೀಕರ ಬಳಿ ಚರ್ಚಿಸಿದಾಗ, ಆ ಏರಿಯಾದಲ್ಲಿ ಒಂದು ಬೆಡ್‌ರೂಮ್ ಮನೆಗಳಿಗೆ ಈಗ ತಿಂಗಳಿಗೆ ₹26,000 ದಿಂದ ₹28,000 ಬಾಡಿಗೆ ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ.
ಇದು ನನ್ನೊಬ್ಬಳ ಕಥೆನಾ ಅಥವಾ ಬೆಂಗಳೂರಿನಲ್ಲಿ ಇದು ಸಾಮಾನ್ಯವಾ ಅಂತ ತಿಳಿಬೇಕಿತ್ತು. ಮನೆ ಮಾಲೀಕರು ದುಡ್ಡಿನ ವಿಚಾರದಲ್ಲಿ ಸಿಕ್ಕಾಪಟ್ಟೆ ಕಿರಿಕಿರಿ ಮಾಡ್ತಾರೆ ಅಂತ ಗೊತ್ತು. ಈಗ ನಾನು ತಿಂಗಳಿಗೆ 4 ಸಾವಿರ ರೂಪಾಯಿ ಹೆಚ್ಚಿಗೆ ಕೊಡ್ತಾ ಇದ್ದೀನಿ, ಇದು ನಿಜಕ್ಕೂ ಹುಚ್ಚುತನ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
https://www.instagram.com/reel/DYMvFoIzyDt/?igsh=MWs3dHppdGFqbGxueA==