newsics.com/ನ್ಯೂಸಿಕ್ಸ್
ಪಶ್ಚಿಮ ಏಷ್ಯಾದ ಯುದ್ಧದ ಬಿಕ್ಕಟ್ಟಿನಿಂದಾಗಿ ಬೆಂಗಳೂರಿನಲ್ಲಿ ಕಮರ್ಷಿಯಲ್ ಗ್ಯಾಸ್, ಆಟೋ ಎಲ್ಪಿಜಿ ಮಾತ್ರವಲ್ಲದೆ ಮದುವೆ ವೆಚ್ಚ ಕೂಡ ಶೇ 30 ರಷ್ಟು ಏರಿಕೆಯಾಗಿದೆ.
ಯುದ್ಧದ ಹಿನ್ನೆಲೆಯಲ್ಲಿ ಅಲಂಕಾರಿಕ ವಸ್ತುಗಳು ಮತ್ತು ಕಚ್ಚಾ ಪದಾರ್ಥಗಳ ಆಮದು ಕುಂಠಿತಗೊಂಡಿದ್ದು, ಬೆಂಗಳೂರಿನಲ್ಲಿ ಈ ಬಾರಿ ಮದುವೆಯ ಸೀಸನ್ ಅಧ್ವಾನಗೊಂಡಿದೆ. ಮದುವೆ ಸಂಘಟಕರ ವ್ಯವಹಾರದಲ್ಲಿ ಭಾರಿ ಏರಿಳಿತಗಳು ಕಂಡುಬರುತ್ತಿದ್ದು, ಬೆಲೆ ಏರಿಕೆಯ ಕಾರಣದಿಂದಾಗಿ ‘ಅದ್ದೂರಿ ಮದುವೆ’ಗಳು ಈಗ ಸರಳವಾಗುತ್ತಿವೆ ಎಂದು ವರದಿಯಾಗಿದೆ.
ಯುದ್ಧ ಮತ್ತು ಅಂತರಾಷ್ಟ್ರೀಯ ಬಿಕ್ಕಟ್ಟಿನಿಂದಾಗಿ ಮದುವೆಯ ಬಜೆಟ್ ಶೇ 30 ರಿಂದ 40 ರಷ್ಟು ಏರಿಕೆಯಾಗಿದೆ ಎಂದು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ.
ಭಾರತೀಯ ಮದುವೆಗಳಲ್ಲಿ ಊಟಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಗ್ಯಾಸ್ ಮತ್ತು ದಿನಸಿ ಪದಾರ್ಥಗಳ ಬೆಲೆ ಏರಿಕೆಯಾದರೂ, ಜನರು ಆಹಾರದ ಮೆನು ಬದಲಿಸಲು ಇಷ್ಟಪಡುತ್ತಿಲ್ಲ. ಬದಲಾಗಿ, ಹೋಟೆಲ್‌ಗಳು ಮತ್ತು ಕ್ಯಾಟರಿಂಗ್ ಸಂಸ್ಥೆಗಳು ಅಡುಗೆಗಾಗಿ ಅತಿ ಹೆಚ್ಚು ಗ್ಯಾಸ್ ಬಳಸುವ ಪದಾರ್ಥಗಳ ಬದಲಿಗೆ ಪರ್ಯಾಯ ವ್ಯವಸ್ಥೆಗಳನ್ನು ಹುಡುಕುತ್ತಿವೆ. ಕಾರ್ಮಿಕರ ಕೊರತೆಯೂ ಮದುವೆ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಾಮ ಬೀರಿದೆ.