newsics.com/ನ್ಯೂಸಿಕ್ಸ್
ಮಹಾರಾಷ್ಟ್ರದ ಕಡುಬಡತನದ ಕೂಲಿಕಾರ್ಮಿಕ ಮಹಿಳೆಯರು ತಮ್ಮ ಗರ್ಭಕೋಶವನ್ನೇ ತೆಗೆಸಿಕೊಳ್ಳುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬೆಳಕಿಗೆ ಬಂದಿದೆ.
https://youtube.com/shorts/xzgXqaAsbcA?si=TkhVxPE1WLxdWyg8
ದಶಕಗಳಿಂದ ಅಲ್ಲಲ್ಲಿ ವರದಿಯಾಗುತ್ತಿದ್ದ ಈ ವಿಷಯವು ಈಗ ಮಹಿಳೆಯರ ಸಂತಾನೋತ್ಪತ್ತಿ, ಆರೋಗ್ಯ ಹಕ್ಕುಗಳು, ಕೂಲಿ ಕಾರ್ಮಿಕರ ಶೋಷಣೆಯ ಬಗ್ಗೆ ರಾಷ್ಟ್ರಮಟ್ಟದ ಚರ್ಚೆಯಾಗಿ ಮಾರ್ಪಟ್ಟಿದೆ. ಇತ್ತೀಚಿನ ವರದಿಗಳು ಈ ಕುರಿತು ಹೊಸ ಮಾಹಿತಿಗಳನ್ನು ಹೊರಹಾಕಿವೆ.
ಮುಟ್ಟಿನ ದಿನಗಳಲ್ಲಿ ಹೆಂಗಸರು ಕೆಲಸಕ್ಕೆ ಗೈರಾಗುತ್ತಾರೆ. ಇದರಿಂದ ಕೆಲಸ ಕುಂಠಿತಗೊಳ್ಳುತ್ತದೆ ಎಂದು ನೆಪವೊಡ್ಡಿ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಗುತ್ತಿಗೆದಾರರು ಹಿಂಜರಿಯುತ್ತಾರೆ. ಇದೇ ಮಹಿಳೆಯರನ್ನು ಗರ್ಭಕೋಶ ರಹಿತರನ್ನಾಗಿ ಮಾಡಲು ಪ್ರೇರಪಿಸಿದೆ ಎಂದು ವರದಿಗಳು ಬಹಿರಂಗಪಡಿಸಿವೆ.
ಅಲ್ಲದೇ, ಶಸ್ತ್ರಚಿಕಿತ್ಸೆಯು ಮುಟ್ಟಿನ ನೋವಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ ಮತ್ತು ದೀರ್ಘಕಾಲದವರೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಮಹಿಳೆಯರಿಗೆ ನಂಬಿಸಲಾಗುತ್ತಿದೆ ಎಂದು ಅದು ತಿಳಿಸಿದೆ.
ಇತ್ತೀಚೆಗೆ ಪ್ರಕಟವಾದ ಮಾಹಿತಿ ಪ್ರಕಾರ, 2024ರ ಕಟಾವು ಹಂಗಾಮಿಗೆ ಮೊದಲು 843 ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಅದರಲ್ಲಿ 477 ಮಹಿಳೆಯರು 30 ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ.
ಕಳೆದ ಒಂದು ದಶಕದಲ್ಲಿ ಜಿಲ್ಲೆಯಲ್ಲಿ 13,000 ಕ್ಕೂ ಹೆಚ್ಚು ಮಹಿಳೆಯರು ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದಿದೆ. ಈ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ 14 ಪಟ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ.
ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸಾಮಾನ್ಯವಾಗಿ ವಲಸೆ ಕಾರ್ಮಿಕ ತಂಡಗಳ ಭಾಗವಾಗಿ ಕೆಲಸ ಮಾಡುತ್ತಾರೆ. ಅವರು ಹೆಚ್ಚಾಗಿ ಗುತ್ತಿಗೆದಾರರ ಅಡಿಯಲ್ಲಿ ‘ಜೋಡಿ’ಗಳಾಗಿ (ಗಂಡ ಮತ್ತು ಹೆಂಡತಿ ಅಥವಾ ಇಬ್ಬರು ಕಾರ್ಮಿಕರು) ನೇಮಕಗೊಳ್ಳುತ್ತಾರೆ.
ಕೆಲಸಕ್ಕೆ ಗೈರುಹಾಜರಾದರೆ, ಕೇವಲ ಒಂದು ದಿನವಾದರೂ ದಿನಕ್ಕೆ ₹500 ರಿಂದ ₹1,000ವರೆಗೆ ದಂಡ ವಿಧಿಸಬಹುದು. ಈ ದಂಡದ ಮೊತ್ತವು ಹಲವು ಬಾರಿ ಅವರ ದೈನಂದಿನ ಕೂಲಿಗಿಂತಲೂ ಹೆಚ್ಚಾಗಿರುತ್ತದೆ.
ಮುಟ್ಟು, ಗರ್ಭಧಾರಣೆ ಅಥವಾ ಅನಾರೋಗ್ಯವು ಅವರ ಆದಾಯದ ಸ್ಥಿರತೆಯ ಮೇಲೆ ನೇರವಾದ ಮತ್ತು ಗಂಭೀರವಾದ ಪರಿಣಾಮ ಬೀರುತ್ತದೆ.
ಹಲವು ದಶಕಗಳಿಂದ ಈ ಬಗ್ಗೆ ವರದಿಗಳು ಬರುತ್ತಿದ್ದರು ಮಹಾರಾಷ್ಟ್ರದ ಯಾವ ಸರ್ಕಾರಗಳು ಇದರ ಬಗ್ಗೆ ಗಂಭೀರ ಕ್ರಮಗಳೇನು ತೆಗೆದುಕೊಂಡಿಲ್ಲ. ಇತ್ತೀಚೆಗೆ ಈ ವಿಚಾರವು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದಂತೆ ತನಿಖಾ ಸಮಿತಿಯನ್ನು ಪುನರ್ ರಚಿಸಿದೆ.