newsics.com/ನ್ಯೂಸಿಕ್ಸ್
ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೋಟೆಲ್‌ನಲ್ಲಿ ಪೈನಾನ್ಸ್ ವ್ಯವಹಾರ ಮಾಡುತ್ತಿದ್ದ ಜಮೀರ್ ಅಹ್ಮದ್ ದರ್ಗಾವಾಲೆಯನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆಗೈದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿದೆ.
https://youtube.com/shorts/yrC3ODyMmjo?si=ybubL3Ee_pXg1sLS
ಏಪ್ರಿಲ್ 24ರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ, ಜಮೀರ್ ಅಹ್ಮದ್ ತಮ್ಮ ಸ್ನೇಹಿತನೊಂದಿಗೆ ಊಟಕ್ಕೆ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ಸ್ನೇಹಿತನನ್ನು ಸಿಗರೇಟ್ ತರಲು ಹೊರಗೆ ಕಳುಹಿಸಿದ್ದಾಗ, ನಾಲ್ಕೈದು ಮಂದಿ ದುಷ್ಕರ್ಮಿಗಳು ಏಕಾಏಕಿ ಹೋಟೆಲ್‌ಗೆ ನುಗ್ಗಿದ್ದಾರೆ.
ಮೊದಲು ಜಮೀರ್ ಅವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ನಂತರ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಜಮೀರ್ ಹೋಟೆಲ್‌ನ ಅಡುಗೆಮನೆಯ ಕಡೆಗೆ ಓಡಲು ಯತ್ನಿಸಿದರೂ, ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಹಿಡಿದುಕೊಂಡು, ಹರಿತವಾದ ಮಚ್ಚಿನಿಂದ ಕುತ್ತಿಗೆಗೆ ಗಂಭೀರವಾಗಿ ಇರಿದು ಕೊಲೆಗೈದಿದ್ದಾರೆ. ಇದಲ್ಲದೆ, ಗುಂಡು ಹಾರಿಸಿದ ಶಂಕೆಯೂ ವ್ಯಕ್ತವಾಗಿದೆ. ಘಟನೆ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಜಮೀರ್ ಅಹ್ಮದ್ ಪೈನಾನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು ಒಂದೂವರೆ ವರ್ಷಗಳ ಹಿಂದೆ ಅವರನ್ನು ಹಣಕ್ಕಾಗಿ ಅಪಹರಣ ಮಾಡಲಾಗಿತ್ತು. ಆಗ ಸುಮಾರು 30 ಲಕ್ಷ ರೂ. ಹಣಕ್ಕಾಗಿ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಆದರೆ, ಮುಂಡಗೋಡ ಪೊಲೀಸರು ಚಾಕಚಕ್ಯತೆಯಿಂದ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನು ಬಂಧಿಸಿ ಜಮೀರ್ ಅವರನ್ನು ರಕ್ಷಿಸಿದ್ದರು.
.ಘಟನೆಯ ಮಾಹಿತಿ ತಿಳಿದ ತಕ್ಷಣ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.