newsics.com
ಮದುವೆಯಾಗಿ ಇನ್ನೂ ಒಂದೂವರೆ ತಿಂಗಳು ಕಳೆದಿರುವಾಗಲೇ ನವವಧು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಮದುವೆಯಾದ ಎರಡು ತಿಂಗಳೊಳಗೆ ಪತ್ನಿ ಗಂಡನನ್ನು ಬಿಟ್ಟು ನಾಪತ್ತೆಯಾಗಿದ್ದಾರೆ. ಇತ್ತ ಸೊಸೆ ಮನೆ ಬಿಟ್ಟು ಹೋಗಿರೋದಕ್ಕೆ ನಾಗರಾಜ್ ತಂದೆ ಆಘಾತದಿಂದ ಮೃತಪಟ್ಟಿದ್ದಾರೆ, ಇದೀಗ ನಾಗರಾಜ್ ಪತ್ನಿಗಾಗಿ ಠಾಣೆ ಮೆಟ್ಟಿಲೇರಿದ್ದಾರೆ.
ಘಟನೆ ಹಿನ್ನೆಲೆ ನೋಡುವುದಾದರೆ, ನಾಗರಾಜ್ ಮತ್ತು ಸಂಜನಾ ಮದುವೆ ಈ ವರ್ಷ ಫೆಬ್ರವರಿ 8ರಂದು ನಡೆದಿತ್ತು. ನಾಗರಾಜ್ ಅವರು ಕೊಪ್ಪಳದ ಗೌರಿ ಅಂಗಳ ನಿವಾಸಿ, ಸಂಜನಾ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನವರು. ಹಿರಿಯರ ಒಪ್ಪಿಗೆಯ ಮೇರೆಗೆ ಎರಡು ಕುಟುಂಬಗಳು ಸಂಬಂಧ ಬೆಳೆಸಿ ಮದುವೆ ಮಾಡಿದ್ದವು. ಮದುವೆಯ ನಂತರ ದಂಪತಿಗಳು ನಾಗರಾಜ್ ಅವರ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಸಂತೋಷವಾಗಿಯೇ ಇದ್ದು, ಆದರೆ ಮಾರ್ಚ್ 21ರಂದು ಇದ್ದಕ್ಕಿದ್ದ ಹಾಗೇ ಹೆಂಡತಿ ನಾಪತ್ತೆಯಾಗಿದ್ದಾಳೆ.
ಘಟನೆ ದಿನ ಸಂಜನಾ ಗಂಡ ನಾಗರಾಜ್ ಅವರನ್ನು ಹತ್ತಿರದ ಮೆಡಿಕಲ್ ಶಾಪ್‌ಗೆ ಮಾತ್ರೆ ತರಲು ಕಳುಹಿಸಿ, ಇತ್ತ ನಾಪತ್ತೆಯಾಗಿದ್ದಾಳೆ. ನಾಗರಾಜ್ ಮನೆಗೆ ಹಿಂದಿರುಗಿದಾಗ ಸಂಜನಾ ಮನೆಯಲ್ಲಿರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಸುಳಿವು ಇರಲಿಲ್ಲ, ಇದು ಕುಟುಂಬಕ್ಕೆ ದೊಡ್ಡ ಶಾಕ್ ಆಗಿದ್ದು, ಈ ಸುದ್ದಿ ತಿಳಿದ ತಕ್ಷಣ ನಾಗರಾಜ್ ಅವರ ತಂದೆ ಖಂಡೆಪ್ಪ ಅವರಿಗೆ ತೀವ್ರ ಮಾನಸಿಕ ಆಘಾತವಾಗಿ, ಸೊಸೆ ಮನೆ ಬಿಟ್ಟು ಹೋದ ದುಃಖದಿಂದ ಹೃದಯಾಘಾತಕ್ಕೀಡಾಗಿ ಅದೇ ದಿನ ಸಾವನ್ನಪ್ಪಿದರು.
ಪತ್ನಿಯನ್ನು ಹುಡುಕಲು ಠಾಣೆ ಮೆಟ್ಟಿಲೇರಿದ ಗಂಡ
ಸದ್ಯ ನಾಗರಾಜ್ ತಮ್ಮ ಪತ್ನಿಯನ್ನು ಹುಡುಕುತ್ತಾ ತುಂಬಾ ಆತಂಕಕ್ಕೀಡಾಗಿದ್ದಾರೆ. ಸಂಜನಾ ಸಹೋದರ ರವಿ ಜೊತೆಗೂಡಿ ಅವರು ಕೊಪ್ಪಳ, ರಾಯಚೂರು, ಹೊಸಪೇಟೆ, ಹುಲಗಿ ಸೇರಿದಂತೆ ಹಲವು ಕಡೆಗಳಲ್ಲಿ ಅಲೆದಾಡಿದ್ದಾರೆ. ಊರು ಊರಿಗೆ ಹೋಗಿ, ಬಂಧುಗಳ ಮನೆಗಳಲ್ಲಿ ವಿಚಾರಿಸಿದ್ದಾರೆ. ಆದರೆ ಸಂಜನಾ ಸುಳಿವು ಸಿಕ್ಕಿಲ್ಲ, ತವರು ಮನೆಗೂ ಆಕೆ ಹೋಗಿಲ್ಲ. ಹೀಗಾಗಿ ಇದೀಗ ನಾಗರಾಜ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಅವರು ಪತ್ನಿಯನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ‘ನನಗೆ ನನ್ನ ಪತ್ನಿ ಬೇಕು. ಅವಳು ಎಲ್ಲಿದ್ದರೂ ಸುರಕ್ಷಿತವಾಗಿ ಹಿಂದಿರುಗಬೇಕು’ ಎಂದು ನಾಗರಾಜ್ ಮನವಿ ಮಾಡಿದ್ದಾರೆ.
ಸಂಜನಾ ಕೈಯಲ್ಲಿ ‘ರವಿ’ ಟ್ಯಾಟೂ ಬಗ್ಗೆ ಮಾಹಿತಿ
ಇನ್ನೂ ದೂರಿನಲ್ಲಿ ನಾಗರಾಜ್ ಮುಖ್ಯವಾದ ಮಾಹಿತಿಯನ್ನು ನೀಡಿದ್ದಾರೆ. ಸಂಜನಾ ಅವರ ಕೈಯಲ್ಲಿ “ರವಿ” ಎಂಬ ಹೆಸರಿನ ಟ್ಯಾಟೂ ಇದೆ ಎಂದು ಉಲ್ಲೇಖಿಸಿದ್ದಾರೆ. ಇದು ಪೊಲೀಸರಿಗೆ ಸಂಜನಾಳನ್ನು ಗುರುತಿಸಲು ಸಹಾಯವಾಗಬಹುದು ಎಂದು ಅವರು ನಂಬಿದ್ದಾರೆ.
ಸದ್ಯ ಎರಡು ಕುಟುಂಬಗಳೂ ಈಗ ತುಂಬಾ ಆತಂಕದಲ್ಲಿದ್ದಾರೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಇಂತಹ ಘಟನೆ ನಡೆಯುವುದು ಎಲ್ಲರಿಗೂ ಆಶ್ಚರ್ಯ ಮತ್ತು ದುಃಖ ತಂದಿದೆ. ಪೊಲೀಸರು ಈಗ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಸಂಜನಾ ಎಲ್ಲಿಗೆ ಹೋದಳು, ಯಾರೊಂದಿಗೆ ಹೋದಳು, ಏನು ಕಾರಣ ಎಂಬುದನ್ನು ಕಂಡುಹಿಡಿಯಲು ಪ್ರಯತ್ನ ನಡೆಸುತ್ತಿದ್ದಾರೆ. ಸಂಜನಾ ಸುರಕ್ಷಿತವಾಗಿರುವುದು ಮತ್ತು ತನ್ನ ಕುಟುಂಬಕ್ಕೆ ಹಿಂದಿರುಗುವುದು ಎಲ್ಲರ ಆಸೆಯಾಗಿದೆ.