newsics.com
ವಾಷಿಂಗ್ಟನ್:ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧದ ಸಂಘರ್ಷ ಮತ್ತು ಅತಿಯಾದ ಶಸ್ತ್ರಾಸ್ತ್ರ ಬಳಕೆ ಅಮೆರಿಕದ ಆರ್ಥಿಕತೆಗೆ ಭಾರಿ ಪೆಟ್ಟು ನೀಡಿದೆ.
ರಷ್ಯಾ ವಿರುದ್ಧ ಹೋರಾಡಲು ಯುಕ್ರೇನ್‌ಗೆ ಮೀಸಲಿಟ್ಟಿದ್ದ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಈಗ ಇರಾನ್ ವಿರುದ್ಧದ ಯುದ್ಧಕ್ಕೆ ತಿರುಗಿಸಲು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಚಿಂತಿಸಿದೆ.
ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನೀಡಿರುವ ಮಾಹಿತಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಯುಕ್ರೇನ್ ಸಂಗ್ರಹಿಸಿದ್ದ ಒಟ್ಟು ಕ್ಷಿಪಣಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯ, ಅಂದರೆ 800 ಪೇಟ್ರಿಯಾಟ್ ಇಂಟರ್ಸೆಪ್ಟರ್ ಕ್ಷಿಪಣಿಗಳನ್ನು ಮಧ್ಯಪ್ರಾಚ್ಯದಲ್ಲಿ ಕೇವಲ ಮೂರೇ ದಿನಗಳಲ್ಲಿ ಹಾರಿಸಲಾಗಿದೆ. ಇರಾನ್‌ನ ನಿರಂತರ ದಾಳಿಯನ್ನು ಎದುರಿಸಲು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಅನಿವಾರ್ಯವಾಗಿ ಈ ದುಬಾರಿ ಕ್ಷಿಪಣಿಗಳನ್ನು ಬಳಸುತ್ತಿವೆ.
ಅಮೆರಿಕದ ಆರ್ಥಿಕತೆಗೆ ಪೆಟ್ಟು ಬಿದಿದ್ದು,ಈ ಯುದ್ಧವು ಅಮೆರಿಕದ ಪಾಲಿಗೆ ಅತ್ಯಂತ ದುಬಾರಿ ವ್ಯವಹಾರವಾಗಿ ಪರಿಣಮಿಸಿದೆ. ಕೇವಲ ಮೊದಲ ಎರಡು ವಾರಗಳಲ್ಲಿ ಅಮೆರಿಕ ಕನಿಷ್ಠ 12 ಬಿಲಿಯನ್ ಡಾಲರ್ (ಸುಮಾರು 1 ಲಕ್ಷ ಕೋಟಿ ರೂ.) ಖರ್ಚು ಮಾಡಿದೆ. ಸರಾಸರಿ ದಿನಕ್ಕೆ 2 ಬಿಲಿಯನ್ ಡಾಲರ್ (ಅಂದಾಜು 16,000 ಕೋಟಿ ರೂ.) ಹಣ ಯುದ್ಧದ ಜ್ವಾಲೆಗೆ ಆಹುತಿಯಾಗುತ್ತಿದೆ.
ಯುದ್ಧದ ಆರಂಭಿಕ ಹಂತದಲ್ಲೇ ಮುವಾಫಕ್ ಸಾಲ್ಟಿ ಏರ್ ಬೇಸ್‌ನಲ್ಲಿದ್ದ ಅತ್ಯಂತ ಪ್ರಮುಖ AN TPY 2 ರಡಾರ್ ವ್ಯವಸ್ಥೆಯನ್ನು ಇರಾನ್ ಧ್ವಂಸಗೊಳಿಸಿದೆ. ಇದು ಅಮೆರಿಕದ THAAD ಕ್ಷಿಪಣಿ ವ್ಯವಸ್ಥೆಯ ಕಣ್ಣು ಇದ್ದಂತೆ. ಈ ರಡಾರ್ ನಾಶವಾಗಿರುವುದರಿಂದ ಅಮೆರಿಕ ಈಗ ಪೇಟ್ರಿಯಾಟ್ ಬ್ಯಾಟರಿಗಳ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಇಡೀ ಜಗತ್ತಿನಲ್ಲಿ ಅಮೆರಿಕದ ಬಳಿ ಕೇವಲ ಎಂಟು THAAD ಬ್ಯಾಟರಿಗಳಿದ್ದು, ಹೊಸ ರಡಾರ್‌ಗಳನ್ನು ತಕ್ಷಣವೇ ತಯಾರಿಸುವುದು ಅಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.