newsics.com
ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಅವರ ಸಿನಿ ವೃತ್ತಿಜೀವನದ ಕೊನೆಯ ಚಿತ್ರ ಎಂದು ಹೇಳಲಾಗುತ್ತಿರುವ ‘ಜನ ನಾಯಗನ್’ ಬಿಡುಗಡೆಗೆ ಎದುರಾಗಿರುವ ಕಂಟಕ ಸದ್ಯಕ್ಕೆ ನಿವಾರಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಈ ವರ್ಷಾರಂಭದಲ್ಲೇ ಜನನಾಯಗನ್ ಸಿನಿಮಾ ತೆರೆ ಮೇಲೆ ಬರಬೇಕಿತ್ತು. 2 ತಿಂಗಳು ಕಳೆದರೂ ಯಾವುದೇ ಹೊಸ ಅಧಿಕೃತ ಬಿಡುಗಡೆ ದಿನಾಂಕವಿರದ ಕಾರಣ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಇದರ ನಡುವೆ ದಳಪತಿ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ.
ಜನನಾಯಗನ್ ಚಿತ್ರದಲ್ಲಿ ಹಲವು ರಾಜಕೀಯ ಪ್ರೇರಿತ ಡೈಲಾಗ್ಗಳಿವೆ ಎಂದು ಸೆನ್ಸಾರ್ ಮಂಡಳಿಯ ಪರಿಶೀಲನಾ ಸಮಿತಿ ಗಮನಿಸಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿಐ)ವು ಈ ಚಿತ್ರವನ್ನು ವೀಕ್ಷಿಸಬೇಕು ಎಂದು ಶಿಫಾರಸು ಮಾಡಿದೆ ಎಂದು ವರದಿಗಳಾಗಿವೆ.
ಮುಖ್ಯ ಚುನಾವಣಾಧಿಕಾರಿ ಅರ್ಚನಾ ಪಟ್ನಾಯಕ್ ಈ ಬಗ್ಗೆ ಮಾತನಾಡಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ಪಕ್ಷದ ನಾಯಕರಾಗಿರುವ ನಟರ ಚಿತ್ರವನ್ನು ಬಿಡುಗಡೆ ಮಾಡಲು ಚುನಾವಣಾ ಆಯೋಗದಿಂದ ಪೂರ್ವಾನುಮತಿ ಅಗತ್ಯವಿದೆಯೇ? ಎಂಬುದರ ಕುರಿತು ಭಾರತೀಯ ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಬೇಕು ಎಂದು ಹೇಳಿದ್ದಾರೆ.
ಏಪ್ರಿಲ್ 23 ರಂದು ತಮಿಳುನಾಡಿನಲ್ಲಿ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳು ಮತ್ತು ನಟ ವಿಜಯ್ ಟಿವಿಕೆ ಪಕ್ಷದ ನಾಯಕರಾಗಿರುವುದನ್ನು ಪರಿಗಣಿಸಿ, ಇಂತಹ ಸಮಯದಲ್ಲಿ ಜನನಾಯಗನ್ ಚಿತ್ರವನ್ನು ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ಸೆನ್ಸಾರ್ ಮಂಡಳಿಯು ಚುನಾವಣಾ ಆಯೋಗಕ್ಕೆ ತಿಳಿಸಿದೆ ಎಂದು ವರದಿಗಳು ತಿಳಿಸಿವೆ.
ತಮಿಳುನಾಡಿನಲ್ಲಿ ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಪಕ್ಷದ ನಾಯಕ ಮತ್ತು ಅಭ್ಯರ್ಥಿ ಎಂದು ಪರಿಗಣಿಸಲ್ಪಟ್ಟ ನಟನೊಬ್ಬನನ್ನು ಒಳಗೊಂಡ ಚಿತ್ರ ಬಿಡುಗಡೆಯಾಗುತ್ತಿರುವುದು ಇದೇ ಮೊದಲು.
https://www.newsics.com/2026/03/20/father-arrested-for-murdering-cow-by-feeding-it-herbicide/