newsics.com
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ 2026-27ನೇ ಸಾಲಿನ ಬಜೆಟ್ನಲ್ಲಿ ಅಡಿಕೆ ಬೆಳೆಗಾರರಿಗೆ ಮಹತ್ವದ ನೆರವು ಘೋಷಿಸಲಾಗಿದೆ. ಎಲೆ ಚುಕ್ಕಿ, ಹಳದಿ ಎಲೆ ರೋಗಗಳ ನಿಯಂತ್ರಣಕ್ಕಾಗಿ ಅಧ್ಯಯನ ಚಟುವಟಿಕೆಗಳಿಗೆ 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗೆ 64 ಕೋಟಿ ರೂ. ವೆಚ್ಚದಲ್ಲಿ ಶೀತಲಗೃಹ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.
ಬಜೆಟ್ ಭಾಷಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಡಿಕೆ ಬೆಳೆಯ ವಿವಿಧ ರೋಗಗಳು ಹಾಗೂ ತೆಂಗು ಬೆಳೆಗೆ ಕಾಣಿಸಿಕೊಳ್ಳುವ ಕಪ್ಪು ತಲೆ ಹುಳು ಮತ್ತು ಬಿಳಿ ನೊಣಗಳ ನಿಯಂತ್ರಣಕ್ಕಾಗಿ ಸಮುದಾಯ ಆಧಾರಿತ ರೋಗ–ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಯೋಜನೆಯನ್ನು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ತೋಟಗಾರಿಕೆ ಇಲಾಖೆಯ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿರುವ ಲಭ್ಯ ಜಮೀನನ್ನು ಬಳಸಿಕೊಂಡು ಉತ್ಕೃಷ್ಟ ಮೌಲ್ಯದ ತೋಟಗಳ ಅಭಿವೃದ್ಧಿ, ಕೊಯ್ಲೋತ್ತರ ಸೌಲಭ್ಯಗಳು ಹಾಗೂ ತೋಟಗಾರಿಕೆ ಆಧಾರಿತ ಕೈಗಾರಿಕೆಗಳನ್ನು ಪಿಪಿಪಿ (PPP) ಮಾದರಿಯಲ್ಲಿ ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ.