newsics.com
ನಾಗರಪಂಚಮಿ ವಿಶೇಷ
ತನಿ ಎರೆಯುವುದು…
ತನಿ ಎರೆಯುವುದು ಎಂದರೆ ಸರ್ಪ ಪ್ರತಿಷ್ಠಾಪನೆಯಾದ ನಾಗರ ಕಲ್ಲಿಗೆ ಹಾಲು, ತುಪ್ಪ ಅಭಿಷೇಕ ಮಾಡಿ, ಹಸಿಕಡಲೆ, ತಂಬಿಟ್ಟು, ಚಿಗುಳಿ ಮುಂತಾದವುಗಳನ್ನು ನೈವೇದ್ಯ ಮಾಡಿ ಪೂಜಿಸುವುದು.
ತನಿ ಎರೆಯುವುದಕ್ಕೆ ಯಾವುದೇ ರೀತಿಯ ದಿನವನ್ನೂ ನಿಗದಿಪಡಿಸಿರುವುದಿಲ್ಲವಾದರೂ ಸಾಮಾನ್ಯವಾಗಿ – ಪಂಚಮಿ, ಚತುರ್ಥಿ, ಷಷ್ಠೀ ತಿಥಿಗಳಿರುವ ದಿನಗಳಂದು ತನಿ ಎರೆಯುವುದು ವಾಡಿಕೆ.
ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ಥಿ ಮತ್ತು ಪಂಚಮಿ ದಿನಗಳಲ್ಲಿ ನಾಗ ಚತುರ್ಥಿ ಮತ್ತು ನಾಗರ ಪಂಚಮಿ ಹಬ್ಬಗಳನ್ನು ಆಚರಿಸುತ್ತಾರೆ. ಅಂದಿನ ದಿನಗಳಲ್ಲಿ ಬೆಳಗಿನ ಜಾವದಲ್ಲಿ ಬೇಗ ಎದ್ದು ತಣ್ಣೀರಿನ ಸ್ನಾನ ಮಾಡಿ, ಮಡಿ ಬಟ್ಟೆಗಳನ್ನು ಧರಿಸಿ, ನಾಗರ ದೇವತೆಗಳ ಆರಾಧನೆ ಮಾಡುವ ಸಂಪ್ರದಾಯ ದೇಶಾದ್ಯಂತ ಆಚರಣೆಯಲ್ಲಿದೆ.
ಪೌರಾಣಿಕ ಹಿನ್ನೆಲೆ
ತನಿ ಎರೆಯುವ ಸಂಪ್ರದಾಯಕ್ಕೆ ಸಂಬಂಧಿಸಿದ ಒಂದು ಪುರಾಣೋಕ್ತ ಐತಿಹ್ಯ ಇರುವುದು ಕಂಡುಬರುತ್ತದೆ. ಸಮುದ್ರಮಂಥನ ಕಾಲದಲ್ಲಿ ಕಡೆಯುವ ಕೆಲಸವು ಸಾಗಿದಂತೆ ಉಚ್ಛೈಶ್ರವಸ್ಸು ಎಂಬ ಕುದುರೆಯು ಸಮುದ್ರದಿಂದ ಹೊರ ಬಂದಿತು. ಕುದುರೆಯ ಬಾಲವು ಕಪ್ಪಗಿದೆ ಎಂದು ಸರ್ಪಗಳ ಮಾತೆಯಾದ ಕದ್ರುವು ಹಾಗೂ ಬಾಲವು ಬಿಳಿಯದಾಗಿದೆ ಎಂದು ಗರುಡನ ತಾಯಿಯಾದ ವಿನುತೆಯ ಮಧ್ಯೆ ವಿವಾದ ಉಂಟಾಗುತ್ತದೆ. ವಾಸ್ತವವಾಗಿ ಕುದುರೆಯ ಬಾಲವು ಕಪ್ಪಾಗಿ ಇರಲಿಲ್ಲ. ಕದ್ರುವಿಗೆ ತಾನು ಸೋಲುತ್ತೇನೆಂಬ ಭೀತಿಯುಂಟಾಯಿತು. ಕೂಡಲೇ ತನ್ನ ಮಕ್ಕಳಾದ ಸರ್ಪಗಳನ್ನು ಕರೆದು ತಮಗಿರುವ ವಿಷದ ಪ್ರಭಾವದಿಂದಾಗಿ ಬಾಲವನ್ನು ಕಪ್ಪಾಗುವಂತೆ ಮಾಡಲು ಆಜ್ಞಾಪಿಸಿದಳು. ಆದರೆ, ಇದು ಅನ್ಯಾಯವೆಂದು ವಾದಿಸಿದ ಸರ್ಪಗಳು ತಾಯಿಯ ಮಾತಿಗೆ ಬೆಲೆ ಕೊಡಲಿಲ್ಲ. ಮಕ್ಕಳ ಅವಿಧೇಯತೆಯಿಂದ ಕೋಪಗೊಂಡ ಕದ್ರುವು ಸರ್ಪಗಳು ನಾಶವಾಗಲಿ ಎಂದು ಶಪಿಸಿದಳು. ತಾಯಿಯ ಶಾಪವನ್ನು ಕೇಳಿದ ಸರ್ಪಗಳು ಹೆದರಿಕೆಯಿಂದ ಬಳಲಿ ಬೆಂಡಾದವು. ವಿಧಿಯಿಲ್ಲದೆ ಒಲ್ಲದ ಮನಸ್ಸಿನಿಂದ ಕುದುರೆಯ ಬಾಲವು ಕಪ್ಪಗಾಗುವಂತೆ ಮಾಡಿ ಗರುಡನ ತಾಯಿಯಾದ ವಿನುತೆಯು ಕದ್ರುವಿನ ದಾಸಿಯಾಗುವಂತೆ ಮಾಡಿದವು. ಆದರೂ, ತಾಯಿಯ ಶಾಪವು ಕೆಲಸ ಮಾಡಲಾರಂಭಿಸಿತು. ಇದರಿಂದ ಸರ್ಪಗಳ ಶರೀರವು ಬಿಸಿಯಾಗಿ ಸುಡಲಾರಂಭಿಸಿತು. ಬಿಸಿಯಿಂದ ಉಂಟಾದ ಉರಿ ಮತ್ತು ದಾಹವನ್ನು ಶಮನ ಮಾಡುವ ಸಲುವಾಗಿ ಸರ್ಪಗಳಿಗೆ ಹಾಲು ಮತ್ತು ತುಪ್ಪದಿಂದ ಸ್ನಾನ ಮಾಡಿಸುವ ಪದ್ಧತಿಯು ಪ್ರಾರಂಭವಾಯಿತು.
ತನಿ ಎರೆಯುವ ಸಂಪ್ರದಾಯ ಬರಲು ಮತ್ತೊಂದು ಪುರಾಣೋಕ್ತ ಐತಿಹ್ಯ ಇರುವುದು ಕಂಡುಬರುತ್ತದೆ. ಸಮುದ್ರ ಮಂಥನ ಮಾಡುವಾಗ ಮಂದರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡು ದೇವತೆಗಳು ಮತ್ತು ದಾನವರು ಸರ್ಪ ರಾಜನಾದ ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ಕಡೆದು ಅಮೃತವನ್ನು ಪಡೆದರು. ಒರಟಾಗಿದ್ದ ಕಲ್ಲು ಬಂಡೆ, ಮುಳ್ಳುಗಳಿಂದ ಕೂಡಿದ್ದ ಮಂದರ ಪರ್ವತಕ್ಕೆ ಹಗ್ಗದಂತೆ ವಾಸುಕಿಯನ್ನು ಸುತ್ತಿ ಸಮುದ್ರವನ್ನು ಕಡೆದದ್ದರಿಂದ ವಾಸುಕಿಯ ಮೈಯೆಲ್ಲವೂ ಕಿತ್ತು ಹೋಗಿ, ತೀವ್ರ ರಕ್ತಸ್ರಾವದಿಂದ ಉರಿ ನೋವುಗಳನ್ನು ಅನುಭವಿಸಬೇಕಾಯಿತು. ಈ ಬಾಧೆಯನ್ನು ಶಮನ ಮಾಡುವ ಸಲುವಾಗಿ ತುಪ್ಪವನ್ನು ಹಚ್ಚಿ ಹಾಲಿನಿಂದ ಅಭಿಷೇಕ ಮಾಡಿ ನೋವು ಉರಿಯನ್ನು ಶಮನ ಮಾಡಲಾಯಿತು.
ಹಾಲು ತುಪ್ಪ ಎರೆಯುವುದರಿಂದ ಸರ್ಪಗಳು ಶಾಂತಚಿತ್ತವಾಗಿ, ಭೂಲೋಕದಲ್ಲಿ ಕಷ್ಟಗಳನ್ನು ಅನುಭವಿಸುತ್ತಿರುವ ಮಾನವರನ್ನು ಹರಸಿ, ಅವರ ಸಂಕಟಗಳನ್ಮು ಪರಿಹರಿಸುವರೆಂಬ ನಂಬಿಕೆ ಪ್ರಚಾರದಲ್ಲಿದೆ. ಆದರೆ, ವೈಜ್ಞಾನಿಕವಾಗಿ ಹುತ್ತಕ್ಕೆ ಹಾಲೆರೆಯುವುದರಿಂದ ಹಾವಿನ ಆರೋಗ್ಯಕ್ಕೆ ಹಾನಿಕಾರಕ, ಪರಿಸರಕ್ಕೂ ಮಾರಕ ಎಂದು ಹೇಳಲಾಗುತ್ತದೆ.
ತಲೆಯೆಲ್ಲಾ ಗಾಯಗಳಾಗಿ ಯಾವುದೇ ಔಷಧೋಪಚಾರಗಳಿಂದ ವಾಸಿಯಾಗದಿದ್ದಾಗ, ಕಿವಿ ಸೋರುತ್ತಿದ್ದಾಗ, ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾಗ ಸಂಕಟಗಳನ್ನು ಅನುಭವಿಸುತ್ತಿದ್ದಾಗ, ರೋಗ ರುಜಿನಗಳಿಂದ ಬಳಲುತ್ತಿದ್ದಾಗ ನಾಗರ ಕಲ್ಲಿಗೆ ಭಕ್ತಿಯಿಂದ ತನಿ ಎರೆದು ನಾಗ ದೇವತೆಗಳ ಆಶೀರ್ವಾದ ಬಲದಿಂದ ಸಂಕಟಗಳನ್ನು ಪರಿಹರಿಸಿಕೊಳ್ಳುತ್ತಾರೆ.
ತನಿ ಎರೆಯುವ ಕ್ರಮ…
ನಾಗರಕಲ್ಲಿಗೆ ತನಿ ಎರೆಯಲು ನಿಶ್ಚಯಿಸಿದ ಹಿಂದಿನ ದಿನ ಫಲಾಹಾರ ಅಥವಾ ಹಾಲನ್ನಷ್ಟೇ ಸೇವಿಸಬೇಕು. ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ, ಮಡಿ ಬಟ್ಟೆಗಳನ್ನು ಧರಿಸಿ ತನಿ ಎರೆಯಲು ತಯಾರಾಗಬೇಕು. ತಣ್ಣೀರಿನ ಸ್ನಾನ ಮಾಡಲು ಆಗದಿದ್ದವರು ಬಿಸಿ ನೀರಿನ ತಲೆ ಸ್ನಾನ ಮಾಡಬಹುದು. ಇದಕ್ಕೆ ಬೇಕಾಗಿರುವುದು ಭಕ್ತಿ ಶ್ರದ್ಧೆ ಬಹಳ ಮುಖ್ಯ.
ಪೂಜೆಗೆ ಬೇಕಾಗುವ ಸಾಮಗ್ರಿಗಳು
1. ಅರಿಶಿನ, ಕುಂಕುಮ, ಗಂಧ, ವೀಳ್ಯದೆಲೆ, ಅಡಿಕೆ, ಗಂಧದ ಕಡ್ಡಿ, ಕರ್ಪೂರ.
2. ಬಿಡಿ ಹೂಗಳು, ಕಟ್ಟಿದ ಹೂಗಳು, ಗೆಜ್ಜೆ ವಸ್ತ್ರ.
3. ತಟ್ಟೆ, ಬಟ್ಟಲು, ಆರತಿ ತಟ್ಟೆ, ಹಲಗಾರತಿ, ಹೂಬತ್ತಿ, ತುಪ್ಪದ ಬತ್ತಿ.
4. ಹಸುವಿನ ಹಾಲು (ಕಾಯಿಸಿರಬಾರದು), ಹಸುವಿನ ತುಪ್ಪ.
5. ನೈವೇದ್ಯ – ನೆನೆಸಿದ ಹಸಿಕಡಲೆ, ಚಿಗುಳಿ ಉಂಡೆ, ಹಸಿ ಅಕ್ಕಿ ತಂಬಿಟ್ಟು. ಇದನ್ನು ಹೊರತುಪಡಿಸಿ ಸಾಧ್ಯವಾದರೆ ಬೇರೆ ಸಿಹಿ ತಿಂಡಿ – ಕಜ್ಜಾಯ, ಹೋಳಿಗೆ ಮಾಡಬಹುದು. (ಎಲ್ಲವನ್ನೂ ಸ್ನಾನ ಮಾಡಿ, ಮಡಿಯಿಂದ ಮಾತನಾಡದೇ, ಎಂಜಲು ಮಾಡದೇ ತಯಾರಿಸಬೇಕು).
6. ಹಣ್ಣುಗಳು, ತೆಂಗಿನಕಾಯಿ.
ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆಗೊಂಡಿರುವ ನಾಗರಕಲ್ಲಿಗೆ ತನಿ ಎರೆಯುವ ಪದ್ಧತಿಯು ಸಾಮಾನ್ಯವಾಗಿರುತ್ತದೆ. ಇಂತಹ ಅನುಕೂಲವಿಲ್ಲದವರು ಮನೆಯಲ್ಲಿಯೇ ಬೆಳ್ಳಿಯ ನಾಗಪ್ಪನನ್ನಾಗಲೀ ಅಥವಾ ಬೇರಾವುದೇ ನಾಗರ ಮೂರ್ತಿಯನ್ನಾಗಲೀ ತಟ್ಟೆಯಲ್ಲಿಟ್ಟು ಹಾಲು ತುಪ್ಪದ ತನಿ ಎರೆಯಬಹುದು. ಹೇಗೆ ಮಾಡಿದರೂ ಭಕ್ತಿ, ಶ್ರದ್ಧೆಗಳಿಂದ ಆಚರಣೆ ಮಾಡಿದ್ದಲ್ಲಿ ಮಾತ್ರ ಫಲಗಳು ಸಿಕ್ಕೇ ಸಿಗುತ್ತವೆ.
ಪೂಜಾ ವಿಧಾನ
ತನಿ ಎರೆಯುವುದರಲ್ಲಿ ಯಾವುದೇ ಲೋಪಗಳನ್ನು ಮಾಡಬಾರದು. ಯಾವುದೇ ರೀತಿಯ ಮೈಲಿಗೆ ಆಗದಂತೆ ಎಚ್ಚರಿಕೆ ವಹಿಸಬೇಕು. ಪೂಜೆ ಸಲ್ಲಿಸುವ ಕ್ರಮದಂತೆಯೇ ನೆರವೇರಿಸಬೇಕು. ಸರ್ಪ ಗಾಯತ್ರೀ ಮಂತ್ರ, ಸರ್ಪ ಸೂಕ್ತ, ಸುಬ್ರಹ್ಮಣ್ಯ ಅಷ್ಟೋತ್ತರ ಮುಂತಾದವುಗಳನ್ನು ಹೇಳುತ್ತಾ ಭಕ್ತಿಯಿಂದ ಆರಾಧನೆ ಮಾಡಬೇಕು.
ಮೊದಲಿಗೆ ನಾಗದೇವತೆಗಳಿಗೆ ಸಂಕಲ್ಪ ಮಾಡಿ, ನೀರಿನ ಅಭಿಷೇಕ ಮಾಡಿ ಹಾಲು ಮತ್ತು ತುಪ್ಪದ ಅಭಿಷೇಕ ಮಾಡಬೇಕು. ಮೂರ್ತಿಗಳನ್ನು ಸ್ವಚ್ಛವಾಗಿ ಯಾವುದೇ ಅಂಟು ಇಲ್ಲದಂತೆ ತೊಳೆಯಬೇಕು. ಅರಿಶಿನವನ್ನು ಕಲಸಿ ಮೂರ್ತಿಗಳಿಗೆ ಸಂಪೂರ್ಣವಾಗಿ ಲೇಪಿಸಬೇಕು. ಗಂಧ, ಕುಂಕುಮ, ಪುಷ್ಪ ಮಾಲಿಕೆ, ಗೆಜ್ಜೆ ವಸ್ತ್ರಗಳಿಂದ ಅಲಂಕರಿಸಬೇಕು.
ಪುಷ್ಪಾಕ್ಷತೆಗಳಿಂದ ಅರ್ಚಿಸಿ, ಧೂಪ, ದೀಪ, ನೈವೇದ್ಯವನ್ನು ಸಮರ್ಪಿಸಿ, ಮಂಗಳ ನೀರಾಂಜನ ಸಲ್ಲಿಸಬೇಕು. ನಂತರ ದೇವರಿಗೆ ಪ್ರದಕ್ಷಿಣ ನಮಸ್ಕಾರ ಮಾಡಿ, ಮನಸ್ಸಿನಲ್ಲಿರುವ ಕೋರಿಕೆಯನ್ನು ಸಲ್ಲಿಸಿ ಅವುಗಳನ್ನು ಈಡೇರಿಸುವಂತೆ ಸರ್ಪ ದೇವತೆಗಳನ್ನು ಪ್ರಾರ್ಥಿಸಬೇಕು.
ಪೂಜೆಯನ್ನು ಸಾಂಗವಾಗಿ ನೆರವೇರಿಸಿದ ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ, ಹೂಗಳನ್ನು ನೀಡಬೇಕು. ಬ್ರಾಹ್ಮಣರಿಗೆ ಅಥವಾ ಸತ್ಪಾತ್ರರಿಗೆ ಯಥೋಚಿತವಾಗಿ ದಾನ ಮಾಡಬೇಕು.
ಪಾಲಿಸಬೇಕಾದ ನಿಯಮಗಳು
1. ವ್ರತಾಚರಣೆ ಮಾಡುವವರು ಹಿಂದಿನ ದಿನ ಹಾಗೂ ಪೂಜೆಯ ದಿನ ಮಾಂಸ ಮದಿರೆಗಳ ಸೇವನೆ ಮಾಡಿರಬಾರದು.
2. ಪೂಜೆಯ ದಿನ ಆಹಾರದಲ್ಲಿ ಈರುಳ್ಳಿ ಬೆಳ್ಳುಳ್ಳಿಗಳನ್ನು ಬಳಸಬಾರದು.
3. ಪೂಜೆ ಸಲ್ಲಿಸುವವರು ಅವಶ್ಯವಾಗಿ ಮಡಿ ವಸ್ತ್ರಗಳನ್ನು ಧರಿಸಬೇಕು.
4. ಹಾಲು ತುಪ್ಪಗಳನ್ನು ಬೆಳ್ಳಿ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಬಳಸಿ ಅರ್ಪಿಸಬೇಕು. ಹಾಲಿನ ಪ್ಯಾಕೆಟ್ ಅಥವಾ ಬಾಟಲಿಗಳಲ್ಲಿ ಹಾಕಬಾರದು.
ಸರ್ಪಾರಾಧನೆ…
ಸರ್ಪ ದೇವತೆಗಳ ಆರಾಧನೆಯನ್ನು ಶುಕ್ಲ ಪಕ್ಷದ ಮುಖ್ಯವಾಗಿ ಪಂಚಮಿ, ಷಷ್ಠೀ ದಿನಗಳಂದು, ಅಲ್ಲದೇ ಬಿದಿಗೆ, ತದಿಗೆ, ಚೌತಿ, ಸಪ್ತಮಿ, ಅಷ್ಟಮಿ ಅಥವಾ ಪೂರ್ಣಿಮಾ ತಿಥಿಗಳಲ್ಲಿ, ಮಂಗಳವಾರ, ಗುರುವಾರ, ಶುಕ್ರವಾರ, ಸೋಮವಾರ ದಿನಗಳಲ್ಲಿ ಮಾಡಬಹುದು. ಈ ದಿನಗಳಲ್ಲಿ ಆರಿದ್ರಾ ಅಥವಾ ಆಶ್ಲೇಷ ನಕ್ಷತ್ರಗಳು ಬಂದರೆ ಇನ್ನೂ ವಿಶೇಷ ಫಲದಾಯಕವಾಗಿರುತ್ತದೆ.
ತಿಳಿದೋ ಅಥವಾ ತಿಳಿಯದೆಯೋ ಮಾಡಿರಬಹುದಾಗಿರುವ ಸರ್ಪ ನಿಂದನೆ, ಸರ್ಪ ಹತ್ಯೆ, ಸರ್ಪ ವಾಸಸ್ಥಾನ ನಾಶ, ಇವೇ ಮೊದಲಾದ ಅಪಚಾರಗಳಿಂದ ಉಂಟಾಗಿರುವ ಸರ್ಪಶಾಪ, ಸರ್ಪದೋಷ ಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾಗದೇವತೆಗಳ ಆರಾಧನೆ ಅತ್ಯಂತ ಸುಲಭದ ಮಾರ್ಗ.
ನಾಗ ಪೂಜೆಯನ್ನು ಪರಿಶುದ್ಧವಾಗಿರುವ ಸ್ಥಳದಲ್ಲಿಯೇ ಆಚರಿಸಬೇಕು. ಮನೆಯಲ್ಲಿ ಮಾಡುವುದಾದರೂ ಸ್ಥಳವನ್ನು ಶುದ್ಧೀಕರಿಸಿ ಪೂಜೆಯನ್ನು ಮಾಡಬೇಕು.
ನಾಗರಪಂಚಮಿ ನಾಡಿಗೆ ದೊಡ್ಡದು… ಪಂಚಮಿ ಹಬ್ಬದ ಹಿನ್ನೆಲೆ… ಸಮಗ್ರ ಮಾಹಿತಿ