newsics.com
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಶ್ರಾವಣ ಸಂಭ್ರಮದ ಮಾಸ. ಹಬ್ಬಗಳ ಮಾಸ. ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಶುರು. ಹಲವರು ಈ ತಿಂಗಳಲ್ಲಿ ಉಪವಾಸ ಮತ್ತು ಪೂಜೆ ಮಾಡುತ್ತಾರೆ. ಈ ತಿಂಗಳು ಮಹಾದೇವನಿಗೆ ಸಮರ್ಪಿತವಾಗಿದೆ. ಎಷ್ಟೋ ಜನ ಈ ಮಾಸದಲ್ಲಿ ಶ್ರಾವಣ ಸೋಮವಾರದಂದು ಮಹಾದೇವನನ್ನು ಪೂಜಿಸುತ್ತಾರೆ. ನಾಗಪಂಚಮಿ, ಕೃಷ್ಣಾಷ್ಟಮಿ, ರಕ್ಷಾಬಂಧನ ಹಬ್ಬಗಳನ್ನೂ ಈ ಮಾಸದಲ್ಲಿ ಆಚರಿಸಲಾಗುತ್ತದೆ.
ಇಂದು (ಆಗಸ್ಟ್ 09) ನಾಗರಪಂಚಮಿ ಹಬ್ಬ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಈ ದಿನದಂದು ದೇಶದೆಲ್ಲೆಡೆ ನಾಗದೇವತೆಯನ್ನು ಪೂಜಿಸಲಾಗುತ್ತದೆ.
ನಾಗರಪಂಚಮಿಯನ್ನು ಶುಕ್ರವಾರ ಆಗಸ್ಟ್ 9 ನಾಳೆ ದಿನದಂದು ಶುಭ ಮುಹೂರ್ತವು ಮಧ್ಯಾಹ್ನ 12:13 ರಿಂದ ಪ್ರಾರಂಭವಾಗಿ ಮಧ್ಯಾಹ್ನ 1 ಗಂಟೆಗೆ ಕೊನೆಗೊಳ್ಳುತ್ತದೆ.
ಪುರಾಣಗಳ ಪ್ರಕಾರ, ಹಿಂದೂ ಧರ್ಮದಲ್ಲಿ ನಾಗನನ್ನು ದೇವರ ರೂಪವೆಂದು ಭಾವಿಸಿ ಪೂಜಿಸಲಾಗುತ್ತದೆ. ಮಹಾದೇವನ ಕೊರಳನ್ನು ವಾಸುಕಿ ಎಂಬ ನಾಗದೇವತೆ ಅಲಂಕರಿಸಿದೆ. ಶ್ರೀ ವಿಷ್ಣುವು ಶೇಷನಾಗನ ಮೇಲೆ ವಿಶ್ರಾಂತಿ ಪಡೆಯುತ್ತಾನೆ. ಆದ್ದರಿಂದ, ನಾವು ಪ್ರಾಚೀನ ಕಾಲದಿಂದಲೂ ನಾಗಾರಾಧಕರು.
ನಾಗರಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಆತನ ಕೃಪೆಯು ನಮಗೆ ಲಭಿಸುತ್ತದೆ. ನಾಗರಪಂಚಮಿಯ ದಿನದಂದು ಪೂಜೆ ಮಾಡುವುದರಿಂದ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ನಾಗರಪಂಚಮಿಯ ದಿನದಂದು ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಳಿರ್, ಕರ್ಕಟ್, ಶಂಖ, ಕಾಳಿಯ, ಪಿಂಗಲರನ್ನು ಪೂಜಿಸಲಾಗುತ್ತದೆ. ಈ ದಿನ ಶಂಕರ, ನಾಗನನ್ನು ಪೂಜಿಸುವವರಿಗೆ ಮಹಾದೇವನ ಕೃಪೆ ಸಿಗುತ್ತದೆ. ಈ ದಿನವನ್ನು ನಾಗಸ್ತೋತ್ರ ಎಂದೂ ಕರೆಯುತ್ತಾರೆ.
ಮರದ ಹಲಗೆ ಅಥವಾ ಗೋಡೆಯ ಮೇಲೆ ಹಾವಿನ ಚಿತ್ರ ಬಿಡಿಸಿ ಅಥವಾ ಮಣ್ಣಿನ ಹಾವನ್ನು ತಂದು ಪೂಜಿಸುತ್ತಾರೆ. ನಾಗನಿಗೆ ಹಸಿ ಹಾಲು ಮತ್ತು ಎಲೆಗಳನ್ನು ನೈವೇದ್ಯ ಮಾಡಲಾಗುತ್ತದೆ. ದೂರ್ವಾ, ಮೊಸರು, ಗಂಧ, ಅಕ್ಷತೆ, ಪುಷ್ಪಗಳನ್ನು ಅರ್ಪಿಸಿ ಪೂಜಿಸುತ್ತಾರೆ. ಈ ವ್ರತವನ್ನು ಮಾಡುವುದರಿಂದ ಮನೆಯಲ್ಲಿ ಹಾವಿನ ಭಯ ಇರುವುದಿಲ್ಲ ಎಂಬ ಸಾಂಪ್ರದಾಯಿಕ ನಂಬಿಕೆ ಇದೆ.
ಶ್ರಾವಣ ಶುದ್ಧ ಪಂಚಮಿಯಂದು ಶ್ರೀಕೃಷ್ಣನು ಕಾಳಿಯ ನಾಗನನ್ನು ಸೋಲಿಸಿ ಯಮುನಾ ನದಿಯಿಂದ ಸುರಕ್ಷಿತವಾಗಿ ಹೊರಬಂದ ದಿನವನ್ನು ನಾಗ ಪಂಚಮಿ ಎಂದು ಆಚರಿಸಲಾಗುತ್ತದೆ. ಇತರ ಪ್ರಸಿದ್ಧ ದಂತಕಥೆಗಳೂ ಇವೆ.
ಹಾವನ್ನು ರೈತನ ಸ್ನೇಹಿತ ಎಂದು ಪರಿಗಣಿಸಲಾಗುತ್ತದೆ. ಅದರ ಹೊರತಾಗಿ ನಾಗಪಂಚಮಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವೂ ವಿಭಿನ್ನವಾಗಿದೆ. ನಾಗಪಂಚಮಿ ದಿನದಂದು ನವನಾಗಗಳನ್ನೂ ಸ್ಮರಿಸಲಾಗುತ್ತದೆ.
***
ನಾಗರಪಂಚಮಿ ವಿಶೇಷ
ಕಾಳಿಂಗ ಮರ್ದನ
ಇದೇ ರೀತಿ ತಿಂಗಳಿಗೊಂದು ನಾಗನನ್ನು ಬಲಿ ಕಪ್ಪದ ರೂಪದಲ್ಲಿ ಗರುಡನಿಗೆ ಅರ್ಪಿಸುತ್ತಾ ವರ್ಷಗಳು ಮಾತ್ರವಲ್ಲ ಯುಗಗಳು ಕೂಡಾ ಉರುಳಿ ಹೋದವು. ಕಾಲಾಂತರದಲ್ಲಿ “ಕಾಳಿಂಗ” ಅಥವಾ “ಕಾಲೀಯ” ಎಂಬ ನಾಗನು ರಮಣಕ ದ್ವೀಪಕ್ಕೆ ಅಧಿಪತಿಯಾದನು. ಆಗ ತಮಗೊಬ್ಬ ಬಲಿಷ್ಠ ನಾಯಕ ದೊರಕಿದನೆಂದು ಅರಿತುಕೊಂಡ ನಾಗಗಳು ಗರುಡನ ವಿರುದ್ಧ ದ್ವೇಷ ಸಾಧನೆಗೆ ಮುಂದಾದವು. ಹಿಂದಿನ ವಿಷಯವನ್ನು ಆತನಿಗೆ ನೆನಪಿಸಿದವು. ಮಾತ್ರವಲ್ಲ ಬಲಿ ಕಪ್ಪದ ರೂಪದಲ್ಲಿ ತಿಂಗಳೊಂದಕ್ಕೆ ಒಂದೊಂದು ನಾಗನನ್ನು ಕಳೆದುಕೊಳ್ಳುವುದನ್ನು ತಪ್ಪಿಸಿ ತಮ್ಮನ್ನು ಕಾಪಾಡುವಂತೆ ಅವು ಕೇಳಿಕೊಂಡವು.
ಆ ವಿಷಯವನ್ನು ನೆನಪಿಸಿ ಕೊಂಡ ಕಾಳಿಂಗನಿಗೆ ಕೋಪ ಉಕ್ಕೇರಿತು. ಗರುಡನಿಗೆ ಕೊಡುತ್ತಿರುವ ಬಲಿಕಪ್ಪವನ್ನು ಆತ ನಿಲ್ಲಿಸುವಂತೆ ಆಜ್ಞಾಪಿಸಿದನು. ಇದರಿಂದ ಕೆರಳಿದ ಗರುಡನು ಕಾಳಿಂಗನೊಡನೆ ಯುದ್ಧಕ್ಕೆ ಬಂದನು. ಮಹಾವಿಷ್ಣುವಿನ ವಾಹನನಾದಮೇಲೆ ಗರುಡನ ವರ್ಚಸ್ಸು ಇನ್ನಷ್ಟು ಹೆಚ್ಚಿತ್ತು. ಹೀಗಾಗಿ ಅವನೊಡನೆ ಯುದ್ಧ ಮಾಡಿ ಗೆಲ್ಲುವುದಕ್ಕೆ ಕಾಳಿಂಗನಿಗೆ ಸಾಧ್ಯವಾಗಲಿಲ್ಲ. ಕಾಳಿಂಗನು ಸೋತನು. ಗರುಡನು ತನ್ನನ್ನೇ ತಿನ್ನಲು ಬಂದಾಗ ಹೆದರಿದ ಕಾಳಿಂಗನು ತನ್ನ ನಾಗಿಣಿಯರೊಡನೆ ರಮಣಕ ದ್ವೀಪವನ್ನೇ ತೊರೆದು ಓಡಿ ಹೋದನು.
ಹಿಂದೆ ಒಮ್ಮೆ ಸೌಭರಿ ಮಹರ್ಷಿಗಳು ಯಮುನಾ ನದಿಯ ನೀರಿನಲ್ಲಿ ಮುಳುಗಿ ಧ್ಯಾನದಲ್ಲಿ ನಿರತರಾಗಿದ್ದಾಗ ಗರುಡನು ಅಲ್ಲಿಗೆ ಬಂದು ಮೀನುಗಳನ್ನು ಭಕ್ಷಿಸ ತೊಡಗಿದನು. ಇದರಿಂದ ಮುನಿಗಳ ಧ್ಯಾನಕ್ಕೆ ಭಂಗವಾಗಿದ್ದರಿಂದ ಅವರು ಗರುಡನನ್ನು “ಇನ್ನು ಮುಂದೆ ಮೀನು ತಿನ್ನಲು ಇಲ್ಲಿಗೆ ಬಂದರೆ ನೀನು ತಕ್ಷಣ ಸತ್ತುಹೋಗು” ಎಂದು ಶಪಿಸಿದರು. ಹೀಗೆ ಸೌಭರಿ ಮುನಿಗಳ ಶಾಪಕ್ಕೆ ಒಳಗಾಗಿದ್ದ ಗರುಡನಿಗೆ ಕಾಳಿಂದಿ ನದಿಯ ಆ ಮಡುವಿಗೆ ಪ್ರವೇಶ ಇಲ್ಲವಾಯಿತು. ಈ ವಿಷಯವು ಕಾಳಿಂಗನಿಗೆ ತಿಳಿದಿತ್ತು. ಹೀಗಾಗಿ ಅವನು ತನ್ನ ನಾಗಿಣಿಯರೊಡನೆ ಯಮುನಾ ನದಿಯ ಆ ಮಡುವಿನಲ್ಲಿ ಮುಳುಗಿ ಅಡಗಿ ಕುಳಿತುಕೊಂಡನು.
ಕಾಳಿಂಗ ಸರ್ಪವು ಯಮುನಾ ನದಿಯೊಳಗೆ ವಾಸ ಮಾಡುತ್ತಿದ್ದುದರಿಂದ ಅದರ ವಿಷದಿಂದಾಗಿ ಇಡೀ ಪ್ರದೇಶವೇ ಕಲ್ಮಷವಾಯಿತು. ನದಿಯ ನೀರಿನಿಂದ ಅವ್ಯಾಹತವಾಗಿ ವಿಷವಾಯು ಹೊರ ಹೊಮ್ಮತೊಡಗಿತು. ಆ ಪ್ರದೇಶದಲ್ಲಿ ಹಕ್ಕಿಗಳು ಹಾರಾಡಿದರೆ ಅವು ಪ್ರಜ್ಞೆ ತಪ್ಪಿ ಬೀಳತೊಡಗಿದವು ಅಥವಾ ಸಾಯತೊಡಗಿದವು. ನದಿಯ ಆಸುಪಾಸಿನ ಗಿಡ ಮರಗಳೂ ಕೂಡಾ ಒಣಗಿ ಹೋಗತೊಡಗಿದವು.
ಹೀಗಿರುವಾಗ ಒಮ್ಮೆ ಬಲರಾಮಕೃಷ್ಣರು ಮಿತ್ರರೊಡಗೂಡಿ ಹಸುಗಳನ್ನು ಮೇಯಿಸಲು ಯಮುನಾ ತೀರಕ್ಕೆ ಹೋದರು. ನೀರಡಿಕೆಯಿಂದ ಹಸುಗಳು ನದಿಯ ನೀರು ಕುಡಿದಾಗ ವಿಷಪೂರಿತ ಜಲದಿಂದಾಗಿ ಅವು ಪ್ರಜ್ಞೆ ತಪ್ಪಿ ಬಿದ್ದವು. ಹಸು ಮೇಯಿಸುತ್ತಿದ್ದ ಬಾಲಕರು ಸಹಾಯಕ್ಕಾಗಿ ಕೂಗತೊಡಗಿದರು. ಗೋಪಾಲಕರ ಬೊಬ್ಬೆಯನ್ನು ಕೇಳಿ ಕೃಷ್ಣನು ಅಲ್ಲಿಗೆ ಬಂದನು.
ಬಿದ್ದಿರುವ ಹಸುಗಳನ್ನು ಕೃಷ್ಣನು ತನ್ನ ವೇಣುವಾದನದಿಂದ ಅವುಗಳನ್ನು ಎಬ್ಬಿಸಿ ಆರೈಕೆ ಮಾಡಿದನು. ನಂತರ ಕೃಷ್ಣನು ನದಿಗೆ ಧುಮುಕಿದನು. ಇದರಿಂದ ಕಾಲೀಯನಿಗೆ ರೋಷ ಉಂಟಾಗಿ ಜೋರಾಗಿ ಶಬ್ದ ಮಾಡುತ್ತ ಕೃಷ್ಣನ ಮೇಲೆ ಎರಗಲು ಮುಂದಾದನು. ಇಬ್ಬರಿಗೂ ಯುದ್ಧವಾಯಿತು. ಯುದ್ಧದಲ್ಲಿ ಕಾಳಿಂಗನಿಗೆ ಸೋಲಾಯಿತು. ಕಾಳಿಂಗನ ಹೆಡೆಗಳ ಮೇಲೇರಿ ಕೃಷ್ಣನು ನರ್ತನ ಮಾಡತೊಡಗಿದನು. ಇದರಿಂದಾಗಿ ಕಾಲೀಯನು ಸೋತು ಬಸವಳಿದು ಹೋದನು. ಆಗ ಅವನ ನಾಗಿಣಿಯರು ಬಂದು ತಮ್ಮ ಗಂಡನ ತಪ್ಪನ್ನು ಕ್ಷಮಿಸಿ ಆತನ ಪ್ರಾಣ ಉಳಿಸುವಂತೆ ಬೇಡಿಕೊಂಡರು.
ಪ್ರಸನ್ನನಾದ ಕೃಷ್ಣನು ಕಾಳಿಂಗನನ್ನು ಕ್ಷಮಿಸಿ ಆತನಿಗೆ “ನೀನು ಈ ಯಮುನೆಯನ್ನು ಬಿಟ್ಟು ಹೋಗು” ಎಂದು ಅಪ್ಪಣೆ ಮಾಡಿದನು. ಆಗ ಕಾಳಿಂಗನು “ಈ ಯಮುನೆಯಿಂದ ಹೊರಗೆ ಬಂದರೆ ಆ ಗರುಡನು ನನ್ನನ್ನು ಕೊಲ್ಲುತ್ತಾನೆ , ಗರುಡನಿಂದ ನನ್ನನ್ನು ಕಾಪಾಡು ದೇವಾ” ಎಂದನು. ಆಗ ಕೃಷ್ಣನು “ಭಯಪಡಬೇಡ , ನಿನ್ನ ಹೆಡೆಗಳ ಮೇಲೆ ಕುಣಿದಾಡಿದ್ದರಿಂದಾಗಿ ನನ್ನ ಕಾಲಿನ ಗುರುತುಗಳು ನಿನ್ನ ಹೆಡೆಯ ಮೇಲೆ ಉಂಟಾಗಿವೆ , ಅವುಗಳನ್ನು ನೋಡಿದರೆ ಆ ಗರುಡನು ಕೂಡಾ ನಿನಗೆ ಏನೂ ಅಪಾಯ ಉಂಟು ಮಾಡಲಾರ” ಎಂದು ಸಾಂತ್ವನ ಹೇಳಿ ಕಾಳಿಂಗನನ್ನು ಅಲ್ಲಿಂದ ಪಾತಾಳಕ್ಕೆ ಕಳುಹಿಸಿಕೊಟ್ಟನು. ಅಂದಿನಿಂದ ಆ ಎಲ್ಲಾ ನಾಗಗಳು ಪಾತಾಳವಾಸಿಗಳಾದವು. ಮುಂದೆ ಆ ಪಾತಾಳವೇ ನಾಗಲೋಕವಾಯಿತು. ಕಾಳಿಂಗನ ವಂಶದ ಎಲ್ಲಾ ನಾಗಗಳ ಹೆಡೆಯ ಮೇಲೂ ಕೃಷ್ಣನ ಪಾದದ ಗುರುತುಗಳಾದವು.
***
ನಾಗರಪಂಚಮಿ ವಿಶೇಷ
ಸರ್ಪಯಾಗ
ಪರೀಕ್ಷಿತನ ಮರಣಾ ನಂತರ ಆತನ ಮಗ ಜನಮೇಜಯನು ಪಟ್ಟವೇರುತ್ತಾನೆ. ಜನಮೇಜಯನು ಭರತ ಖಂಡವನ್ನು ಆಳಿದ ದ್ವಾಪರಾ ಯುಗದ ಕೊನೆಯ ಚಕ್ರವರ್ತಿಯಾಗಿದ್ದಾನೆ. ದ್ವಾಪರಾ ಯುಗವು ಮುಗಿದು ಕಲಿಯುಗವು ಪ್ರಾರಂಭವಾಗುವ ಆ ಯುಗ ಸಂಧಿ ಕಾಲದಲ್ಲಿ ಆಳಿಕೊಂಡಿದ್ದವನು ಜನಮೇಜಯ. ಹೀಗಾಗಿ ಕಲಿಯುಗದ ಪ್ರಥಮ ಚಕ್ರವರ್ತಿಯೂ ಅವನೇ ಆಗಿದ್ದಾನೆ. ಒಂದು ರೀತಿಯಲ್ಲಿ ಆತನೊಬ್ಬ ಯುಗ ಪ್ರವರ್ತಕ. ಚಿಕ್ಕಂದಿನಲ್ಲಿಯೇ ಚಕ್ರವರ್ತಿ ಪಟ್ಟವನ್ನು ಸ್ವೀಕರಿಸಿ ಹಲವು ವರ್ಷಗಳವರೆಗೆ ಭರತ ಖಂಡವನ್ನು ಆಳಿ ಬೆಳೆದು ದೊಡ್ಡವನಾಗಿದ್ದರೂ ಆತನಿಗೆ ತನ್ನ ತಂದೆಯ ಸಾವಿನ ರಹಸ್ಯವು ತಿಳಿದಿರಲಿಲ್ಲ. ಏಕೆಂದರೆ ಆತನ ತಾಯಿ ಇರಾವತಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಯಾರೂ ಕೂಡಾ ಆತನಿಗೆ ಆ ವಿಷಯವನ್ನು ತಿಳಿಸಿರಲಿಲ್ಲ.
ಹೀಗಿರುವಾಗ ವೇದ ಮುನಿಗಳ ಆಶ್ರಮದಲ್ಲಿ ಆತನ ಶಿಷ್ಯನಾದ ಉತ್ತಂಕ ಎಂಬ ವಟುವೊಬ್ಬನು ವಿದ್ಯಾಭ್ಯಾಸವನ್ನು ಮೂರೈಸಿದ ಬಳಿಕ ತನ್ನ ಗುರುಗಳಿಗೆ ಗುರುಕಾಣಿಕೆಯನ್ನು ಕೊಡಬೇಕೆಂದು ತೀರ್ಮಾನಿಸಿದನು. ಆದರೆ ವೇದ ಮುನಿಗಳು ಶಿಷ್ಯರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಆದರೂ ಉತ್ತಂಕನು ಬಂದು ಗುರುಗಳಿಗೆ ವಂದಿಸಿ “ಗುರುಗಳೇ ನಿಮ್ಮ ದಯೆಯಿಂದಲೇ ನಾನು ವಿದ್ಯೆಯನ್ನು ಕಲಿತೆ , ನಾನು ನಿಮಗೆ ಗುರುದಕ್ಷಿಣೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕೆಂಬುದನ್ನು ಹೇಳಿ , ತಂದು ಕೊಡುವೆ , ಅದನ್ನು ದಯವಿಟ್ಟು ಸ್ವೀಕರಿಸಬೇಕು” ಎನ್ನುತ್ತಾನೆ. ಆಗ ವೇದಮುನಿಗಳು “ನೀನು ಉತ್ತಮ ಪ್ರಜೆಯಾದರೆ ಅದೇ ನನಗೆ ಗುರುಕಾಣಿಕೆ , ನಾನು ಕಾಣಿಕೆಗಳನ್ನು ಸ್ವೀಕರಿಸುವುದಿಲ್ಲ , ಬೇಕಿದ್ದರೆ ನೀನು ನನ್ನ ಪತ್ನಿಯನ್ನು ಕೇಳಿ ನೋಡು” ಎಂದು ಉತ್ತಂಕನನ್ನು ತನ್ನ ಹೆಂಡತಿಯೆಡೆಗೆ ಕಳುಹಿಸುತ್ತಾನೆ.
ಉತ್ತಂಕನು ಗುರುಪತ್ನಿ ಇದ್ದೆಡೆಗೆ ಹೋಗಿ ವಂದಿಸಿ “ತಾಯಿ ನನ್ನ ವಿದ್ಯಾಭ್ಯಾಸ ಮುಗಿದಿದೆ , ನೀವು ನನ್ನನ್ನು ಮಗನಂತೆ ಸಾಕಿ ಸಲಹಿದ್ದೀರಿ , ನಾನು ಗುರುಕಾಣಿಕೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕು ಹೇಳಿ” ಎನ್ನುತ್ತಾನೆ. ಆಗ ಆಕೆಯು “ನಾನು ಪೂಜೆಗೆಂದು ಸುಮಂಗಲಿಯರನ್ನು ಆಹ್ವಾನಿಸಿದ್ದೇನೆ , ಅವರೆಲ್ಲ ಬರುವಾಗ ನಾನು ಬರಿ ಕಿವಿಯಲ್ಲಿ ಇರುವುದು ಸರಿಯಲ್ಲ , ಹೀಗಾಗಿ ಆ ಒಂದು ದಿನದ ಮಟ್ಟಿಗೆ ಪೌಷ್ಯ ರಾಜನ ಹೆಂಡತಿಯ ಕಿವಿಯ ಓಲೆಗಳನ್ನು ತಂದು ಕೊಡುವೆಯಾ” ಎಂದು ಕೇಳುತ್ತಾಳೆ. ಉತ್ತಂಕನು “ಆದೀತು” ಎಂದು ಹೇಳಿ ಅವಳಿಗೆ ವಂದಿಸಿ ಅಲ್ಲಿಂದ ತೆರಳುತ್ತಾನೆ.
ಉತ್ತಂಕನು ಪೌಷ್ಯ ರಾಜನ ಅರಮನೆಗೆ ಹೋಗುತ್ತಾನೆ. ತನ್ನನ್ನು ಕಾಣಲೆಂದೇ ಬಂದಿರುವ ವಟುವಿಗೆ ರಾಣಿಯು ವಂದಿಸಿ ಉಪಚರಿಸಿ ಬಂದಿರುವ ಕಾರಣವನ್ನು ಕೇಳುತ್ತಾಳೆ. ಉತ್ತಂಕನು ವಿಷಯವನ್ನು ತಿಳಿಸಿದಾಗ , ರಾಣಿಗೆ ತುಂಬಾ ಸಂತೋಷವಾಗುತ್ತದೆ. “ಋಷಿ ಪತ್ನಿಯೋರ್ವಳು ನನ್ನ ಆಭರಣಗಳನ್ನು ಬಯಸಿದ್ದಾಳೆ ಎಂದರೆ ಅದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ , ಕೇವಲ ಒಂದು ದಿನದ ಮಟ್ಟಿಗಲ್ಲ ಶಾಶ್ವತವಾಗಿ ಅವುಗಳನ್ನು ಆ ಮುನಿ ಪತ್ನಿಗೆ ನೀಡುತ್ತೇನೆ , ಆದರೆ ಕೊಂಡು ಹೋಗುವಾಗ ಜಾಗ್ರತೆ , ಇವು ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾದ ಆಭರಣಗಳಾಗಿವೆ , ಈ ಹಿಂದೆ ತಕ್ಷಕನು ಅವುಗಳನ್ನು ಅಪರಿಸಲು ಪ್ರಯತ್ನಿಸಿದ್ದಾನೆ , ಹೀಗಾಗಿ ವಿಶೇಷವಾಗಿ ಎಚ್ಚರವಹಿಸಿ” ಎಂದು ಹೇಳಿ ಉತ್ತಂಕನಿಗೆ ನವರತ್ನ ಖಚಿತವಾದ ಆ ಆಭರಣಗಳನ್ನು ನೀಡುತ್ತಾಳೆ.
ಉತ್ತಂಕನು ಆಭರಣಗಳನ್ನು ಗಂಟು ಕಟ್ಟಿಕೊಂಡು ಬರುವಾಗ ಪೌಷ್ಯ ರಾಣಿಯು ಹೇಳಿದಂತೆಯೇ ದಾರಿಯಲ್ಲಿ ತಕ್ಷಕನು ಅವನನ್ನು ಅಡ್ಡಯಿಸುತ್ತಾನೆ. ಫಣಿಗಳಿಗೆ ಮಣಿ ರತ್ನಗಳ ಮೇಲೆ ವ್ಯಾಮೋಹ ಜಾಸ್ತಿ ತಾನೇ ? ಹೀಗಾಗಿ ಅವನು ಉತ್ತಂಕನನ್ನು ವಂಚಿಸಿ ಅವನ ಬಳಿಯಿದ್ದ ಆಭರಣಗಳನ್ನು ಬಲಾತ್ಕಾರವಾಗಿ ಕೊಂಡೊಯ್ದು ಪಾತಾಳದಲ್ಲಿ ಬಚ್ಚಿಡುತ್ತಾನೆ.
ಅಸಹಾಯಕನಾದ ಉತ್ತಂಕನು ಅಳುತ್ತಾನೆ , ಹೇಗಾದರೂ ಮಾಡಿ ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡು ನೇರವಾಗಿ ಹಸ್ತಿನಾವತಿಗೆ ಹೋಗುತ್ತಾನೆ. ಅಲ್ಲಿ ಅರಸನಾದ ಜನಮೇಜಯನನ್ನು ಗುಪ್ತವಾಗಿ ಭೇಟಿಮಾಡಿ ಆತನಿಗೆ ಆತನ ತಂದೆ ಪರೀಕ್ಷಿತನ ಮರಣ ರಹಸ್ಯವನ್ನು ತಿಳಿಸುತ್ತಾನೆ. ತನ್ನ ತಂದೆಯ ಮರಣಕ್ಕೆ ತಕ್ಷಕನೇ ಕಾರಣ ಎಂಬ ವಿಷಯವನ್ನು ತಿಳಿದ ಜನಮೇಜಯನು ಸಿಟ್ಟಿನಿಂದ ಹಾರಾಡುತ್ತಾನೆ. ಆಗ ಉತ್ತಂಕನು “ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳುವ ಇಚ್ಛೆ ನಿನಗಿದ್ದರೆ ಈ ಕೂಡಲೇ ಸರ್ಪಯಾಗವನ್ನು ಮಾಡು , ನಾಗಕುಲವನ್ನೇ ನಾಶ ಮಾಡು” ಎಂದು ಹೇಳಿ ಆತನಲ್ಲಿ ನಾಗದ್ವೇಷದ ಬೀಜವನ್ನು ಬಿತ್ತಿ ಹೊರಟು ಹೋಗುತ್ತಾನೆ.
ತಾಯಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಎಷ್ಟೇ ಹೇಳಿದರೂ ಕೇಳದ ಜನಮೇಜಯನು ತಕ್ಷಕನ ಮೇಲೆ ಕುಪಿತನಾಗಿ ಸಂಪೂರ್ಣ ನಾಗಕುಲವನ್ನೇ ನಾಶಪಡಿಸುತ್ತೇನೆ ಎಂಬುದಾಗಿ ಸರ್ಪಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಜಗತ್ತಿನಲ್ಲಿ ಈ ಹಿಂದೆ ಯಾರೂ ಮಾಡದೇ ಇದ್ದ , ಮುಂದೆ ಕೂಡಾ ಯಾರೂ ಮಾಡದಂತಹ ಸರ್ಪಯಾಗವನ್ನು ಮಾಡಲು ಉದ್ಯುಕ್ತನಾಗುತ್ತಾನೆ.
ಸರ್ಪಯಾಗಕ್ಕಾಗಿ ಬೃಹತ್ ಯಾಗ ಶಾಲೆಯನ್ನು ನಿರ್ಮಿಸಿ , ಋಷಿ ಮುನಿಗಳನ್ನು ಬ್ರಾಹ್ಮಣರನ್ನೆಲ್ಲ ಆಮಂತ್ರಿಸಿ , ಬೇಡಿದ ವಿಪ್ರರಿಗೆ ಅವರಿಗೆ ಬೇಕಾದುದನ್ನು ದಾನ ಮಾಡುತ್ತಾ ವಿಜೃಂಭಣೆಯಿಂದ ಯಾಗವನ್ನು ನಡೆಸುತ್ತಾನೆ. ಅಧ್ವರ್ಯುವಾಗಿ ತಾನೇ ಕುಳಿತುಕೊಳ್ಳುತ್ತಾನೆ. ಪುರೋಹಿತರು ಮಂತ್ರೋಚ್ಛಾರಣೆ ಮಾಡಿ ಆಹ್ವಾನಿಸಿದಂತೆ ಮಂತ್ರದ ವಶೀಕರಣಕ್ಕೆ ಸಿಲುಕಿದ ನಾಗಗಳು ಒಂದೊಂದಾಗಿ ಬಂದು ಯಜ್ಞಕುಂಡಕ್ಕೆ ಬಿದ್ದು ಆಹುತಿಯಾಗತೊಡಗುತ್ತವೆ. ಹಲವು ನಾಗ ಸಂತತಿಗಳು ಅಳಿದು ಹೋಗುತ್ತವೆ. ಎಲ್ಲಾ ನಾಗಗಳು ಸುಟ್ಟು ಹೋದರೂ ತಕ್ಷಕನ ಸುಳಿವೇ ಇರಲಿಲ್ಲ. ಆತನನ್ನು ಸ್ವರ್ಗದಲ್ಲಿ ದೇವೇಂದ್ರನು ರಕ್ಷಿಸಿ ಹಿಡಿದಿಟ್ಟುಕೊಂಡಿದ್ದನು. ಇದನ್ನು ಅರಿತ ಪುರೋಹಿತರು “ದೇವೇಂದ್ರ ಸಹಿತನಾಗಿ ತಕ್ಷಕನು ಬರಲಿ” ಎಂಬುದಾಗಿ ಮಂತ್ರ ಉಚ್ಛರಿಸುತ್ತಾರೆ. ಹೆದರಿದ ದೇವೇಂದ್ರ ತಾನು ತಪ್ಪಿಸಿಕೊಳ್ಳುತ್ತಾನೆ.
ಇನ್ನೇನು ತಕ್ಷಕನು ಬಂದು ಬೆಂಕಿಯಲ್ಲಿ ಬೀಳುತ್ತಾನೆ ಎಂಬಾಗ , ಆಸ್ತೀಕನೆಂಬ ವಟುವು ಬಂದು ತಡೆಯುತ್ತಾನೆ. ಜನಮೇಜಯನಿಗೆ ಕೋಪ ಬರುತ್ತದೆ. “ಎಲೈ ವಟುವೇ , ನಿನಗೇನು ಬೇಕೋ ಕೇಳು , ಕೊಡುವೆ , ಯಾಗವನ್ನು ನಿಲ್ಲಿಸಬೇಡ” ಎನ್ನುತ್ತಾನೆ. ಆಗ ಆಸ್ತೀಕನು ಜನಮೇಜಯನನ್ನು ಸಂತೈಸಿ , ಆತನ ತಂದೆಯ ಮರಣದ ನಿಜ ವೃತ್ತಾಂತವನ್ನು ತಿಳಿಸುತ್ತಾನೆ. “ತಕ್ಷಕನದ್ದೇನೂ ತಪ್ಪಿರಲಿಲ್ಲ , ಅವನು ಕಚ್ಚುವುದಕ್ಕೆ ಮುನಿಯ ಶಾಪವೇ ಕಾರಣ. ಹಾಗಂತ ಮುನಿಯದ್ದೂ ತಪ್ಪಿರಲಿಲ್ಲ. ಅವನು ಶಪಿಸಲು ನಿನ್ನ ತಂದೆ ಆತನ ತಂದೆಗೆ ಮಾಡಿದ ಅಪಚಾರವೇ ಕಾರಣ. ಮತ್ತೆ ನಿನ್ನ ತಂದೆಯದ್ದೂ ತಪ್ಪಿರಲಿಲ್ಲ. ಆತ ಹಾಗೆ ತಪ್ಪಿ ನಡೆಯಲು ಕಲಿಯ ಪ್ರೇರಣೆಯೇ ಕಾರಣ. ಇದೆಲ್ಲವೂ ಕಲಿ ಕಾಲದ ಮಹಿಮೆ. ಆದ್ದರಿಂದ ನೀನು ಯಜ್ಞವನ್ನು ನಿಲ್ಲಿಸು. ಸುಮ್ಮನೇ ನಾಗ ಶಾಪಕ್ಕೆ ಒಳಗಾಗಬೇಡ” ಎನ್ನುತ್ತಾನೆ.
ಆಸ್ತೀಕನ ಮಾತನ್ನು ಒಪ್ಪಿದ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸುತ್ತಾನೆ. ಆದರೆ ಅಷ್ಟರಲ್ಲಾಗಲೇ ಹೆಚ್ಚು ಕಡಿಮೆ ಎಲ್ಲಾ ಸರ್ಪಕುಲಗಳು ಯಜ್ಞಕ್ಕೆ ಆಹುತಿಯಾಗಿ ಕೇವಲ ತಕ್ಷಕನ ಕುಲವೊಂದು ಮಾತ್ರ ಉಳಿದಿರುತ್ತದೆ. ಸರ್ಪಯಾಗವನ್ನು ನಿಲ್ಲಿಸಿದ ತರುವಾಯ ಜನಮೇಜಯನು ತಕ್ಷಕನಲ್ಲಿ ಕ್ಷಮೆ ಯಾಚಿಸುತ್ತಾನೆ. ತಕ್ಷಕನು ಜನಮೇಜಯನನ್ನು ಕ್ಷಮಿಸುತ್ತಾನೆ. ಆದರೂ ಅಷ್ಟರಲ್ಲಾಗಲೇ ಆತನು ಹಲವು ನಾಗಗಳನ್ನು ದಹಿಸಿದ್ದರಿಂದ ಜನಮೇಜಯನಿಗೆ ನಾಗದೋಷ ಬರುತ್ತದೆ.
ಸರ್ಪಯಾಗವು ಅರ್ಧಕ್ಕೇ ನಿಂತುಹೋಗಿ ತಕ್ಷಕನು ಬದುಕಿ ಉಳಿದುದನ್ನು ತಿಳಿದ ಉತ್ತಂಕನು ಸಿಟ್ಟಾಗುತ್ತಾನೆ. ಆತನು ಮತ್ತೆ ಪುನಹ ಅಗ್ನಿಯನ್ನು ಆಹ್ವಾನಿಸಿ ಆತನಿಗೆ ಸರ್ಪಲೋಕವಾದ ಪಾತಾಳವನ್ನೇ ಸುಡುವಂತೆ ಆಜ್ಞಾಪಿಸುತ್ತಾನೆ. ಅಗ್ನಿಯು ಪಾತಾಳವನ್ನು ಸುಡಲಾರಂಭಿಸಿದಾಗ ಮತ್ತೆ ಸಂಕಷ್ಟಕ್ಕೆ ಒಳಗಾದ ತಕ್ಷಕನು ದೇವೇಂದ್ರನಲ್ಲಿ ಮೊರೆ ಇಡುತ್ತಾನೆ. ಆಭರಣಗಳನ್ನು ಉತ್ತಂಕನಿಗೆ ಹಿಂದಿರುಗಿಸಿ ಆತನಲ್ಲಿ ಕ್ಷಮೆ ಬೇಡುವಂತೆ ದೇವೇಂದ್ರನು ತಕ್ಷಕನಿಗೆ ಸಲಹೆ ನೀಡುತ್ತಾನೆ. ಅಂತೆಯೇ ತಕ್ಷಕನು ಆಭರಣಗಳನ್ನು ಹಿಂದಿರುಗಿಸಿ ಕ್ಷಮೆಯಾಚಿಸುತ್ತಾನೆ. ಆಭರಣಗಳನ್ನು ಪುನಹ ಪಡೆದ ಉತ್ತಂಕನು ಅಗ್ನಿಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಾನೆ ಮತ್ತು ನಂತರ ತನ್ನ ಗುರುಪತ್ನಿಗೆ ಆಭರಣಗಳನ್ನು ನೀಡಿ ತನ್ನ ಗುರುದಕ್ಷಿಣೆಯನ್ನು ಪೂರೈಸುತ್ತಾನೆ.
ಇತ್ತ ನಾಗದೋಷದ ಪರಿಣಾಮವಾಗಿ ಜನಮೇಜಯನನ್ನು ಕುಷ್ಟರೋಗವು ಬಾಧಿಸುತ್ತದೆ. ಮುಂದೆ ಗುರುವಾಯೂರು ಕ್ಷೇತ್ರದಲ್ಲಿ ಶ್ರೀಹರಿಯ ದರ್ಶನವಾದೊಡನೆ ಆತನ ದೋಷಗಳೆಲ್ಲವೂ ಪರಿಹಾರವಾಗುತ್ತವೆ. ಹಾಗೂ ಮುಂದೆ ಹಲವು ಕಾಲಗಳವರೆಗೆ ಜನಮೇಜಯನು ಈ ಕಲಿಯುಗದಲ್ಲಿಯೂ ಚಕ್ರವರ್ತಿಯಾಗಿ ಮೆರೆಯುತ್ತಾನೆ.
ಆಸ್ತೀಕನು ತನ್ನನ್ನು ಹಾಗೂ ತನ್ನ ಕುಲದವರನ್ನು ಉಳಿಸಿದ್ದರಿಂದಾಗಿ ಹರುಷಗೊಂಡು “ಯಾರು ಆಸ್ತೀಕ, ಆಸ್ತೀಕ, ಆಸ್ತೀಕ ಎಂಬುದಾಗಿ ಮೂರು ಬಾರಿ ಉಚ್ಛರಿಸುತ್ತಾರೋ ಅವರಿಗೆ ನಾಗದೋಷ ತಟ್ಟದೇ ಇರಲಿ” ಎಂಬ ವರವೊಂದನ್ನು ತಕ್ಷಕನು ಕರುಣಿಸುತ್ತಾನೆ.
ಹೀಗೆ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸಿದ ದಿನವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಅದನ್ನೇ ನಾವು ನಾಗರ ಪಂಚಮಿ ಎಂಬುದಾಗಿ ಆಚರಿಸುತ್ತೇವೆ. ಅಷ್ಟಕುಲ ನಾಗಗಳಾದ ಅನಂತ(ಶೇಷ) , ವಾಸುಕಿ , ಪದ್ಮ , ಮಹಾಪದ್ಮ , ತಕ್ಷಕ , ಕುಲೀಕ , ಕಾರ್ಕೋಟಕ ಮತ್ತು ಶಂಖಪಾಲ ಇವುಗಳನ್ನು ನಾವು ಆ ದಿನ ಪೂಜಿಸುತ್ತೇವೆ. ಅರಶಿನ , ಕುಂಕುಮ , ಅಕ್ಕಿ ಮತ್ತು ಹೂವನ್ನು ನಾಗದೇವರಿಗೆ ಅರ್ಪಿಸುತ್ತೇವೆ. ಹಸಿಹಾಲು , ತುಪ್ಪ , ಸಕ್ಕರೆಯನ್ನು ನಾಗದೇವರ ಮೂರ್ತಿಗೆ ಅರ್ಪಿಸುತ್ತೇವೆ. ಪೂಜೆ ಪೂರ್ಣಗೊಂಡ ಬಳಿಕ ನಾಗದೇವರಿಗೆ ಆರತಿ ಬೆಳಗುತ್ತೇವೆ. ಹಾವಾಡಿಗರಿಗೆ ದಾನ ಮಾಡುವ ಕ್ರಮವೂ ಕೆಲವು ಕಡೆ ಇದೆ. ಪೂಜೆಯ ಅಂತ್ಯದಲ್ಲಿ ನಾಗ ಪಂಚಮಿಯ ಕಥೆಯನ್ನು ಕೇಳುವುದು ಒಳ್ಳೆಯದು.
—
ಕೃಪೆ: ಹರಿಕೃಷ್ಣ ಹೊಳ್ಳ , ಬ್ರಹ್ಮಾವರ
(ನಾಗೋದ್ಭವ ಮತ್ತು ಗರುಡೋದ್ಭವ – ಇದು ಬಲಿಪ ನಾರಾಯಣ ಭಾಗವತರ ಗರುಡೋದ್ಭವ ಪ್ರಸಂಗದ ಕಥಾಭಾಗವಾಗಿದೆ. ಕಾಳಿಂಗ ಮರ್ದನ – ಇದು ದಾಮೋದರ ಪುಣಿಂಚತ್ತಾಯರು ಬರೆದ ಕಾಳಿಂಗ ಮರ್ದನ ಪ್ರಸಂಗದ ಕಥಾಭಾಗವಾಗಿದೆ. ಪರೀಕ್ಷಿತ ಮತ್ತು ಸರ್ಪಯಾಗ – ಇದು ರಾಘವ ನಂಬಿಯಾರ್ ಅವರ ಚಕ್ರೇಶ್ವರ ಪರೀಕ್ಷಿತ ಪ್ರಸಂಗದ ಕಥಾಭಾಗವಾಗಿದೆ.)