Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಬಾಗಲಕೋಟೆ ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಹೆಚ್.ವೈ ಮೇಟಿ(79) ಇಂದು ಕೊನೆಯುಸಿರೆಳೆದಿದ್ದಾರೆ
ಅನಾರೋಗ್ಯಕ್ಕೆ ಒಳಗಾಗಿದ್ದ ಶಾಸಕ ಮೇಟಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಕೂಡ ಮೇಟಿ ಅವರ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆ ಫಲಿಸದೇ ಮೇಟಿ ಅವರು ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹುಲ್ಲಪ್ಪ ಯಮನಪ್ಪ ಮೇಟಿ ಒಬ್ಬ ಭಾರತೀಯ ರಾಜಕಾರಣಿ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾಗಿದ್ದಾರೆ. 2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ , ಮೇಟಿ ಅವರು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ 68,216 ಮತಗಳನ್ನು ಪಡೆದಿದ್ದರು.
ಸದ್ದು ಮಾಡಿದ್ದ ಸಿಡಿ:
2013ರ ವಿಧಾನಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆಗ ಹೆಚ್.ವೈ.ಮೇಟಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಅಬಕಾರಿ ಖಾತೆ ಹೊಣೆ ನೀಡಿದ್ದರು.
2016ರಲ್ಲಿ ಅಬಕಾರಿ ಸಚಿವ ಹೆಚ್.ವೈ.ಮೇಟಿ ರಾಸಲೀಲೆ ನಡೆಸಿದ್ದಾರೆ ಎಂಬ ವಿಡಿಯೋ ಹೊರಬಂದಿತ್ತು. ಸ್ಥಳೀಯ ಸುದ್ದಿ ವಾಹಿನಿಗಳು ವಿಡಿಯೋ ಪ್ರಸಾರ ಮಾಡಲು ಪ್ರಾರಂಭಿಸಿದ ನಂತರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸಚಿವರ ರಾಜೀನಾಮೆ ಸ್ವೀಕಾರ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು. ‘ಅಬಕಾರಿ ಸಚಿವ ಶ್ರೀ ಎಚ್‌ವೈ ಮೇಟಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕರಿಸುವಂತೆ ನಾನು ಗೌರವಾನ್ವಿತ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದೇನೆ. ತನಿಖೆಗೂ ಆದೇಶಿಸಿದ್ದೇನೆ’ ಎಂದು ಹೇಳಿದ್ದರು. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.