Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ವಿವರಿಸಿದ್ದಾರೆ. ಈ ತತ್ವಗಳು ಮತ್ತು ನೀತಿಗಳು ನಮ್ಮ ಜೀವನವನ್ನು ಸುಧಾರಿಸುವಲ್ಲಿ, ಕುಟುಂಬ ಸಂಬಂಧವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಅಪ್ಪ ಮಗಳ ಸಂಬಂಧ ಎನ್ನುವಂತಹದ್ದು ತುಂಬಾನೇ ಪವಿತ್ರ, ಪ್ರೀತಿಪೂರ್ವಕವಾದುದು. ಹೀಗಿರುವಾಗ ಮಗಳ ಭವಿಷ್ಯ ಮತ್ತು ಕುಟುಂಬದ ಘನತೆಯ ಮೇಲೆ ಪರಿಣಾಮ ಬೀರದಂತೆ ಹೆಣ್ಣು ಮಗುವಿನ ತಂದೆಯಾದವನ ವರ್ತನೆ ಹೇಗಿರಬೇಕು, ಅವನು ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬ ಬಗ್ಗೆ ಚಾಣಕ್ಯರು ತಿಳಿಸಿದ್ದಾರೆ.
ಹೆಣ್ಣು ಮಗಳ ತಂದೆಯಾದವನು ಮಾಡಬಾರದ ಕೆಲಸಗಳಿವು:
ಮಗಳ ಆಸೆಗಳನ್ನು ಅಗೌರವಿಸುವುದು: ತಂದೆ ತನ್ನ ಮಗಳ ಇಚ್ಛೆಗೆ ಅಗೌರವ ತೋರಿಸಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಮಗಳ ಭಾವನೆಗಳು, ಕನಸುಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ತಂದೆಯ ಪ್ರಾಥಮಿಕ ಕರ್ತವ್ಯ. ಆಕೆಯ ಶಿಕ್ಷಣ, ವೃತ್ತಿ ಅಥವಾ ಮದುವೆಯಂತಹ ಪ್ರಮುಖ ನಿರ್ಧಾರಗಳ ಬಗ್ಗೆ ಆಕೆಯ ಅಭಿಪ್ರಾಯಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಮಗಳ ಆತ್ಮವಿಶ್ವಾಸ ಕುಗ್ಗಬಹುದು. ಹಾಗಾಗಿ ಮಗಳ ಆಸೆಗಳನ್ನೂ ಗೌರವಿಸಿ. ಆಕೆಯ ಭಾವನೆಗಳಿಗೂ ಬೆಲೆ ಕೊಡಿ.
ಮಗಳ ಮೇಲೆ ಅನಗತ್ಯ ನಿಯಂತ್ರಣ: ತಂದೆ ತನ್ನ ಮಗಳ ಮೇಲೆ ಅತಿಯಾದ ನಿಯಂತ್ರಣವನ್ನು ಹೇರಬಾರದು ಎಂದು ಚಾಣಕ್ಯರು ಹೇಳುತ್ತಾರೆ. ತನ್ನ ಮಗಳಿಗೆ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯನ್ನು ಕಲಿಸುವುದು ಮುಖ್ಯ. ಅದು ಬಿಟ್ಟು ಸ್ನೇಹಿತರನ್ನು ಭೇಟಿಯಾಗುವುದು ಅಥವಾ ಆಕೆಯ ಇಷ್ಟದ ವೃತ್ತಿಯನ್ನು ಆಯ್ಕೆ ಮಾಡುವಂತಹ ಪ್ರತಿಯೊಂದು ಚಟುವಟಿಕೆಯನ್ನು ನಿರ್ಬಂಧಿಸುವುದರಿಂದ ಆಕೆಯ ಸ್ವಾತಂತ್ರ್ಯಕ್ಕೂ ಧಕ್ಕೆಯಾಗಬಹುದು. ಅಲ್ಲದೆ ಇದು ಅವಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಮಗಳ ಮುಂದೆ ಅನುಚಿತವಾಗಿ ವರ್ತಿಸುವುದು: ಒಬ್ಬ ತಂದೆಯಾದವನು ಮಗಳ ಮುಂದೆ ಯಾವುದೇ ಕಾರಣಕ್ಕೂ ಅನುಚಿತವಾಗಿ ವರ್ತಿಸಬಾರದು ಚಾಣಕ್ಯರು ಹೇಳುತ್ತಾರೆ. ತಂದೆಯೇ ಮಗಳಿಗೆ ಹೀರೋ ಹೀಗಿರುವಾಗ ತಂದೆ ಅನೈತಿಕ ಕೃತ್ಯಗಳಲ್ಲಿ ತೊಡಗುವುದು, ಅಗೌರವದಿಂದ ವರ್ತಿಸುವುದು ಮಗಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಇದು ಇಡೀ ಕುಟುಂಬದ ಘನತೆಯನ್ನು ಹಾಳು ಮಾಡುತ್ತದೆ. ಅಷ್ಟೇ ಅಲ್ಲದೆ ಇದರಿಂದ ಮಗಳಿಗೆ ತನ್ನ ತಂದೆಯ ಮೇಲಿನ ನಂಬಿಕೆಯೂ ಸತ್ತು ಹೋಗಬಹುದು.
ಮಗಳ ಮದುವೆಯಲ್ಲಿ ಆತುರ ಅಥವಾ ನಿರ್ಲಕ್ಷ್ಯ: ಒಬ್ಬ ತಂದೆಯಾದವನು ತನ್ನ ಮಗಳ ಮದುವೆಯನ್ನು ಆತುರದಿಂದ ಅಥವಾ ಅಜಾಗರೂಕತೆಯಿಂದ ಮಾಡದೆ ಚಿಂತನಶೀಲವಾಗಿ ಮಾಡಬೇಕು ಎಂದು ಚಾಣಕ್ಯರು ಹೇಳುತ್ತಾರೆ. ತಂದೆ ತನ್ನ ಮಗಳಿಗೆ ಸೂಕ್ತವಾದ ಜೋಡಿಯನ್ನು ಆಯ್ಕೆಮಾಡುವಾಗ ಎಚ್ಚರಿಕೆ ವಹಿಸಬೇಕು. ಆಕೆಯ ಶಿಕ್ಷಣ, ಮೌಲ್ಯಗಳು ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ. ಸಾಮಾಜಿಕ ಒತ್ತಡ ಅಥವಾ ಆತುರದಿಂದಾಗಿ ತಪ್ಪು ವರನನ್ನು ಆರಿಸಿದರೆ ನಂತರ ಮಗಳ ಜೀವನ ನರಕವಾಗಬಹುದು. ಆದ್ದರಿಂದ ಮಗಳ ಮದುವೆಯ ವಿಚಾರದಲ್ಲಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು.
ಮಗಳ ಸುರಕ್ಷತೆಯನ್ನು ನಿರ್ಲಕ್ಷಿಸುವುದು: ಮಗಳನ್ನು ರಕ್ಷಿಸುವುದು ತಂದೆಯ ಪರಮ ಕರ್ತವ್ಯ ಮತ್ತು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು ಪಾಪಕ್ಕೆ ಸಮ ಎನ್ನುತ್ತಾರೆ ಚಾಣಕ್ಯ. ತನ್ನ ಮಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ತಂದೆಯ ಕರ್ತವ್ಯ. ಅದು ಅವಳ ಶಿಕ್ಷಣ, ಸಾಮಾಜಿಕ ಪರಿಸರ ಅಥವಾ ಭಾವನಾತ್ಮಕ ಅಗತ್ಯ ಹೀಗೆ ಯಾವುದೇ ಆಗಿರಲಿ, ತಂದೆ ಯಾವಾಗಲೂ ಮಗಳ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಮಗಳ ಭವಿಷ್ಯವೇ ಹಾಳಾಗುವ ಸಾಧ್ಯತೆ ಇರುತ್ತದೆ.