ಮೈಸೂರು : ಮೈಸೂರು ದಸರಾದ ಕೇಂದ್ರ ಬಿಂದು, ಪ್ರಮುಖ ಆಕರ್ಷಣೆ ಅಂದ್ರೆ ಅದು ಜಂಬೂ ಸವಾರಿ. ಇಂದು ವಿಜಯದಶಮಿಯಂದು ಜಂಬೂಸವಾರಿ ನಡೆಯಲಿದೆ. ಆದರೆ ಈ ಜಂಬೂಸವಾರಿಗೂ ಮುನ್ನ ನಂದಿಧ್ವಜಕ್ಕೆ ಪೂಜೆ ನಡೆಯುತ್ತೆ.
ನಂದಿಧ್ವಜಕ್ಕೆ ಪೂಜೆ ನಡೆದ ಬಳಿಕವೇ ಮೆರವಣಿಗೆಗೆ ಚಾಲನೆ ನೀಡಲಾಗುತ್ತೆ. ನಂದಿ ಪೂಜೆಗೆ ತನ್ನದೇ ಆದ ಮಹತ್ವ, ಇತಿಹಾಸವಿದೆ. ಸುಮಾರು 33 ಅಡಿ ಎತ್ತರದ, 150 ಕೆಜಿ ತೂಕದ ನಂದಿ ಧ್ವಜವನ್ನು ಎತ್ತಿ ಹೆಜ್ಜೆ ಹಾಕುವುದು ಸುಲಭದ ಮಾತಲ್ಲ. ಬನ್ನಿ ನಂದಿಧ್ವಜ ಪೂಜೆಯ ಇತಿಹಾಸ, ಅದರ ಹಿಂದಿನ ಉದ್ದೇಶ ತಿಳಿಯೋಣ.
ದೇವಸ್ಥಾನಗಳಲ್ಲಿ ಗಣಪತಿಗೆ ಮೊದಲ ಪೂಜೆಯಾದರೆ ಶುಭ ಸಮಾರಂಭಗಳಲ್ಲಿ ಮೊದಲು ನಂದಿಗೆ ಪೂಜೆ ಮಾಡುವ ನಂಬಿಕೆ ಹಿಂದಿನಿಂದಲೂ ಬಂದಿದೆ.ಜೊತೆಗೆ ನಂದಿಗೆ ಮೊದಲ ಪೂಜೆ ಮಾಡಿದರೆ ವಿಘ್ನ ಬರುವುದಿಲ್ಲ ಈ ಕಾರಣದಿಂದಲೇ ಸುಮಾರು 400 ವರ್ಷಗಳಿಂದಲೂ ನಂದಿಗೆ ಪೂಜೆ ಸಲ್ಲಿಸಿಯೇ ಮುಂದುವರೆಯುತ್ತಾರೆ
ನಂದಿ ಪೂಜೆ ಇತಿಹಾಸ
ರಾಜ ಮಹಾರಾಜರ ಕಾಲದಿಂದಲೂ ಈ ನಂದಿ ಧ್ವಜ ಕುಣಿತವಿದೆ. ಮೈಸೂರಿನಲ್ಲಿ ರಾಜಾ ಒಡೆಯರ್ ಅವರು ದಸರಾವನ್ನು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅಂದರೆ 1799ರಲ್ಲಿ ಒಡೆಯರು ತಮ್ಮ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿಕೊಂಡರು. ನಂತರ ದಸರಾ ಆಚರಣೆಗಳು ಮೈಸೂರಿನಲ್ಲಿ ನಡೆದವು. ಜಂಬೂ ಸವಾರಿ ಆರಂಭಕ್ಕೂ ಮುನ್ನ ಶುಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಆ ಬಳಿಕ 24 ಕುಶಾಲ ತೋಪುಗಳ ಗೌರವವನ್ನು ಸಮರ್ಪಣೆ ಮಾಡಲಾಗುತ್ತದೆ. ಅಲ್ಲಿಂದ ಅರಮನೆ ಆವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ ಸಿಲುತ್ತದೆ. ಈ ಮೂಲಕ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೊದಲೇ ನಂದಿ ಧ್ವಜಕ್ಕೆ ಪೂಜೆ ಮಾಡಲಾಗುತ್ತೆ. ಈ ಮೂಲಕ ನಂದಿ ಧ್ವಜಕ್ಕೂ ತನ್ನದೇ ಆದ ವಿಶಿಷ್ಟ್ಯವಿದೆ