newsics.com
ನವದೆಹಲಿ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇಶದ ಎರಡನೇ ಶ್ರೀಮಂತ ಸಚಿವ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.
ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿ ಎಡಿಆರ್ ಈ ವರದಿ ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು ಸಚಿವರು ಇದ್ದಾರೆ. ಆಂಧ್ರ ಪ್ರದೇಶವು ನಂತರದ ಸ್ಥಾನದಲ್ಲಿದೆ.
643 ಸಚಿವರ ಪೈಕಿ 302 ಮಂದಿ (ಶೇ 47) ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. 174 ಸಚಿವರ ವಿರುದ್ಧ (ಶೇ 27) ಗಂಭೀರ ಅಪರಾಧ ಪ್ರಕರಣಗಳಿವೆ. ಈ ಸಚಿವರು ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಸಂಪುಟದ 72ರಲ್ಲಿ 29 (ಶೇ 40) ಮಂದಿ ವಿರುದ್ಧ ಪ್ರಕರಣಗಳಿವೆ.
ಗಂಭೀರ ಕ್ರಿಮಿನಲ್ ಆರೋಪದಲ್ಲಿ 30 ದಿನ ಶಿಕ್ಷೆಗೊಳಗಾದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ಪದಚ್ಯುತಿಗೊಳಿಸುವ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದ ಬೆನ್ನಲ್ಲೇ ಈ ವರದಿ ಬಿಡುಗಡೆಯಾಗಿದೆ.
ಆಂಧ್ರ ಪ್ರದೇಶ, ತಮಿಳುನಾಡು, ಬಿಹಾರ, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ತೆಲಂಗಾಣ, ಹಿಮಾಚಲ ಪ್ರದೇಶ, ದೆಹಲಿ ಮತ್ತು ಪುದುಚೇರಿ ಸೇರಿದಂತೆ 11 ವಿಧಾನಸಭೆಯ ಶೇ. 60 ರಷ್ಟು ಸಚಿವರ ಮೇಲೆ ಕ್ರಿಮಿನಲ್ ಆರೋಪವಿದೆ. ಇದಕ್ಕೆ ವಿರುದ್ಧವಾಗಿ ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ನಾಗಲ್ಯಾಂಡ್, ಉತ್ತರಾಖಂಡ್ ರಾಜ್ಯಗಳಲ್ಲಿ ಯಾವುದೇ ಸಚಿವರು ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ.
30 ವಿಧಾನಸಭಾ ಕ್ಷೇತ್ರಗಳ ಪೈಕಿ 11ರಲ್ಲಿ ಕೋಟ್ಯಧೀಶರಿದ್ದಾರೆ. ಕರ್ನಾಟಕದಲ್ಲಿ 8 ಮಂದಿ ಬಿಲಿಯನೇರ್ ಸಚಿವರಿದ್ದಾರೆ. ನಂತರ ಆಂಧ್ರಪ್ರದೇಶದಲ್ಲಿ ಆರು, ಮಹಾರಾಷ್ಟ್ರದಲ್ಲಿ ನಾಲ್ಕು ಇಂತಹ ಸಚಿವರಿದ್ದಾರೆ.
ಲೋಕಸಭೆಯಲ್ಲಿ ಆಂಧ್ರಪ್ರದೇಶದ ಗುಂಟೂರಿನಿಂದ ಪ್ರತಿನಿಧಿಸುವ ಟಿಡಿಪಿಯ ಡಾ. ಚಂದ್ರಶೇಖರ್ ಪೆಮ್ಮಸಾನಿ ದೇಶದ ಅತ್ಯಂತ ಶ್ರೀಮಂತ ಸಚಿವರಾಗಿದ್ದಾರೆ. ಇವರು ಒಟ್ಟು ರೂ. 5,705 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ನಾಯಕ, ಡಿ ಕೆ ಶಿವಕುಮಾರ್ ಅವರು 1,413 ಕೋಟಿ ಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ರೂ. 931 ಕೋಟಿಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ.
ಟಾಪ್ 10 ರಲ್ಲಿರುವ ಇತರ ಶ್ರೀಮಂತ ಸಚಿವರೆಂದರೆ ಆಂಧ್ರಪ್ರದೇಶದ ನಾರಾಯಣ ಪೊಂಗೂರು ಮತ್ತು ನಾರಾ ಲೋಕೇಶ್, ತೆಲಂಗಾಣದ ಗದ್ದಂ ವಿವೇಕಾನಂದ ಮತ್ತು ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಕರ್ನಾಟಕದ ಸುರೇಶ್ ಬಿ ಎಸ್, ಮಹಾರಾಷ್ಟ್ರದ ಮಂಗಲ್ ಪ್ರಭಾತ್ ಲೋಧಾ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಇದ್ದಾರೆ.