newsics.com
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಅವರ ಮನೆ ಮತ್ತು ಕಚೇರಿಯ ಮಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಮನೆ ಮತ್ತು ಕಚೇರಿಯ ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಅವರಿಗೆ ಸೇರಿದ ಚಳ್ಳಕೆರೆ ಪಟ್ಟಣದಲ್ಲಿರುವ ನಾಲ್ಕು ಮನೆ, ಬೆಂಗಳೂರಿನ ಸಹಕಾರ ನಗರದಲ್ಲಿರುವ ನಿವಾಸ ಮತ್ತು ಅವರಿಗೆ ಸೇರಿದ ಹಲವು ಕಂಪನಿಗಳ ಮೇಲೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಹಲವಾರು ಖಾಸಗಿ ವಾಹನಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳು ಶುಕ್ರವಾರ ಚಳ್ಳಕೆರೆ ಮತ್ತು ಬೆಂಗಳೂರು, ಗೋವಾದಲ್ಲಿ ಏಕಾಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮಾತ್ರವಲ್ಲದೆ ಅವರ ಸಹೋದರರಾದ ಕೆ.ಸಿ.ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ ಅವರ ಮನೆ ಮತ್ತು ಕಚೇರಿಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ ಅವರಿಗೆ ಸೇರಿದ ಬೆಂಗಳೂರು, ಚಳ್ಳಕೆರೆ, ಗೋವಾ, ಚಿತ್ರದುರ್ಗ ಸೇರಿ ಒಟ್ಟು ೧೭ ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ವಿರೇಂದ್ರ ಪಪ್ಪಿ ಅವರ ಕಂಪನಿಗಳು : ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮಾಲೀಕತ್ವದ ಕಂಪನಿಗಳ ಮೂಲಕ ಮನಿಲ್ಯಾಂಡ್ರಿಂಗ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರತ್ನಾ ಗೇಮಿಂಗ್ ಸೋಲುಷನ್ಸ್ ರತ್ನ ಗೋಲ್ಡ್ ಕಂಪನಿ, ರತ್ನ ಮಲ್ಟಿ ಸೋರ್ಸ್ ಕಂಪನಿ, ಪಪ್ಪಿ ಟೆಕ್ನಾಲೋಜಿಸ್ ಕಂಪನಿ, ಪಪ್ಪಿ ಟೂರ್ಸ್ ಅಂಡ್ ಟ್ರಾವೆಲ್ಸ್, ಪಪ್ಪಿ ಬಿಯರ್ ಬಾಕ್ಸ್ ಕಂಪನಿ ಕಚೇರಿ ಮೇಲೊ ದಾಳಿ ನಡೆಸಲಾಗಿದೆ.
ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ವಿರೇಂದ್ರ ಪಪ್ಪಿ ಅವರ ನಿವಾಸ ಹಾಗೂ ಬೆಂಗಳೂರಿನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಪ್ರಸ್ಟೇಜ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಅವರು, ಇಡಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.