newsics.com
ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಾರಿ ನಿರ್ದೇಶನಾಲಯ (ED) 300 ಕೋಟಿ ರೂ ಮೌಲ್ಯದ 160 ಆಸ್ತಿ ಮುಟ್ಟುಗೋಲು ಹಾಕಿತ್ತು. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬಹಿರಂಗವಾಗಿರಲಿಲ್ಲ. ಆದರೆ ಇದೀಗ ಮುಟ್ಟುಗೋಲು ಹಾಕಿದ ಪಟ್ಟಿಯನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಸೇರಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಇ.ಡಿ ರವಾನೆ ಮಾಡಿದೆ.
ಇ.ಡಿ ಬಿಡುಗಡೆ ಮಾಡಿದ ಮೂರನೇ ಪಟ್ಟಿ ಟಿವಿ9ಗೆ ಲಭ್ಯವಾಗಿದ್ದು, ಒಬ್ಬನೇ ವ್ಯಕ್ತಿಗೆ ಅಕ್ರಮವಾಗಿ 30 ರಿಂದ 40 ನಿವೇಶನಗಳು ಕೊಟ್ಟಿರುವುದು ಪತ್ತೆ ಆಗಿದೆ. ಆ ಮೂಲಕ ಮುಡಾ ಪ್ರಕರಣದ ಮತ್ತಷ್ಟು ಕರ್ಮಕಾಂಡ ಬಯಲಾಗಿದೆ.
ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಕರಣ. ಮುಡಾ ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸಿ ಇತ್ತೀಚೆಗೆ 300 ಕೋಟಿ ರೂ ಮೌಲ್ಯದ 160 ಆಸ್ತಿ ಮುಟ್ಟುಗೋಲು ಹಾಕಿತ್ತು. ಸದ್ಯ ಈ ವಿಚಾರವಾಗಿ ಮತ್ತಷ್ಟು ಸ್ಫೋಟಕ ಅಂಶಗಳು ಪತ್ತೆಯಾಗಿದೆ.
ಒಬ್ಬ ವ್ಯಕ್ತಿಗೆ ಅಕ್ರಮವಾಗಿ 30ಕ್ಕೂ ಹೆಚ್ಚು ನಿವೇಶನ ಹಂಚಿಕೆ ಪತ್ತೆ
ಇ.ಡಿ ಬಿಡುಗಡೆ ಮಾಡಿದ ಮೂರನೇ ಪಟ್ಟಿ ಪ್ರಕಾರ ಒಬ್ಬನೇ ವ್ಯಕ್ತಿಗೆ ಅಕ್ರಮವಾಗಿ 30 ರಿಂದ 40 ನಿವೇಶನಗಳನ್ನು ಕೊಟ್ಟಿರುವುದನ್ನು ಇ.ಡಿ ಪತ್ತೆ ಹಚ್ಚಿದೆ. ಮೈಸೂರಿನ ಹೆಸರಾಂತ ಚರ್ಚ್ ಕ್ಯಾಥೆಡ್ರಲ್ ಪರೀಷ್ ಸೊಸೈಟಿ ಒಂದಕ್ಕೆ ನೀಡಿದ್ದ 40 ಸೈಟ್ಗಳನ್ನು ಮುಟ್ಟುಗೋಲು ಹಾಕಲಾಗಿದೆ.
7 ನೇ ವಯಸ್ಸಿನಲ್ಲಿ ಭೂಮಿ ಕಳೆದುಕೊಂಡಿದ್ದೇನೆ ಎಂದು ಅರ್ಜಿ ಹಾಕಿದ್ದ ಅಬ್ದುಲ್ ವಾಹಿದ್ ಎಂಬಾತನಿಗೆ ನೀಡಿದ್ದ 41 ಸೈಟ್ಗಳನ್ನು ಇ.ಡಿ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಕುವೆಂಪು ನಗರದ ರವಿಕುಮಾರ್, ಸುಜಾತ, ಮಹೇಶ್ ಹಾಗೂ ರಾಜು ಕುಟುಂಬಕ್ಕೆ ನೀಡಿದ್ದ 31 ನಿವೇಶನಗಳು ಮತ್ತು ಪ್ರತಿಷ್ಠಿತ ಆಂದೋಲನ ವೃತ್ತದ ಬಳಿ ಹಲವರಿಗೆ ನೀಡಿದ್ದ 48 ಬೇನಾಮಿ ಸೈಟ್ಗಳನ್ನು ಇಡಿ ಮುಟ್ಟುಗೋಲು ಹಾಕಿದೆ.
ಇನ್ನು ನಗರದ ಹೃದಯ ಭಾಗದಲ್ಲೇ ಮುಡಾ ಕೈತಪ್ಪಿ ಹೋಗುತ್ತಿದ್ದ ಜಾಗವನ್ನು ಇ.ಡಿ ಸೀಜ್ ಮಾಡಿದೆ. ಕುವೆಂಪು ನಗರ, ದಟ್ಟಗಳ್ಳಿ, ಆಂದೋಲನ ವೃತ್ತ, ವಿಜಯ ನಗರ, ಜೆ.ಪಿ.ನಗರ, ದೇವನೂರು ಬಡಾವಣೆ ಆರ್.ಟಿ.ನಗರಗಳಲ್ಲಿ ಬೇನಾಮಿಯಾಗಿ ಸೈಟ್‌ಗಳು ನೀಡಲಾಗಿತ್ತು. ಇವುಗಳಲಿಂದಲೇ ಮುಡಾಗೆ ಸುಮಾರು 500 ಕೋಟಿ ರೂ ನಷ್ಟ ಸಾಧ್ಯತೆ ಎನ್ನಲಾಗಿದೆ. ಸದ್ಯ ಪಟ್ಟಿಯಲ್ಲಿರುವ ಯಾವುದೇ ನಿವೇಶನದ ಪರಭಾರೆ ಮಾಡದಂತೆ ತಡೆ ನೀಡಲಾಗಿದೆ. ಸದ್ಯ ಇಡಿ ತನಿಖೆ ಪ್ರಗತಿಯಲ್ಲಿದೆ.