newsics.com
ಬರಗಾಲದಿಂದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತದೆ ಎನ್ನುವ ಆಘಾತಕಾರಿ ವಿಚಾರವನ್ನು ಅಧ್ಯಯವೊಂದು ತಿಳಿಸಿದೆ.
ಆಸ್ಟ್ರೇಲಿಯಾದ ಕರ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಕಡಿಮೆ ಆದಾಯ ಇರುವ ದೇಶಗಳಲ್ಲಿ ದೀರ್ಘಕಾಲದ ಬರಗಾಲ ಪರೋಕ್ಷವಾಗಿ ಸಾಮಾಜಿಕ ದುರ್ಬಲತೆಗಳನ್ನು ಹದಗೆಡಿಸುತ್ತದೆ. ಇದರಿಂದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತದೆ ಎಂದು ತಿಳಿಸಿದೆ.
ಪಿಎಲ್‌ಇಎಸ್ ಗ್ಲೋಬಲ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿಯಲ್ಲಿ, ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಆಗ್ನೆಯ ಏಷ್ಯಾದ 14 ದೇಶಗಳಿಂದ 13-24 ವರ್ಷ ವಯಸ್ಸಿನೊಳಗಿನ 35,000ಕ್ಕೂ ಹೆಚ್ಚು ಮಹಿಳೆಯರ ಸಮೀಕ್ಷೆಯನ್ನು ಆಧರಿಸಿ ಈ ಸಂಶೋಧನೆ ನಡೆಸಲಾಗಿದ್ದು, ತೀವ್ರ ಬರಗಾಲದ ಸಮಯದಲ್ಲಿ ಲೈಂಗಿಕ ದೌರ್ಜನ್ಯದ ಸಾಧ್ಯತೆ ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.
ಬರಗಾಲದ ಸಮಯದಲ್ಲಿ ನೀರಿಗಾಗಿ ಮಹಿಳೆಯರು ಜನನಿಬಿಡದ ಪ್ರದೇಶಗಳಿಗೆ ಹೋಗಬೇಕಾದ ಪರಿಸ್ಥಿತಿ, ದುಡಿಮೆಗಾಗಿ ವಲಸೆ ಹೋಗಿ ವಸತಿ ಇಲ್ಲದೇ ಎಲ್ಲೋ ಆಶ್ರಯ ಪಡೆಯುವ ಪರಿಸ್ಥಿತಿ ಮತ್ತು ಬೇಗ ಮದುವೆ ಮಾಡಬೇಕಾದ ಪರಿಸ್ಥಿತಿ ಎದುರಾಗುವುದರಿಂದ, ಇಂತಹ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತದೆ ಎನ್ನುವ ಅಂಶವನ್ನು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.