newsics.com
ಉಡುಪಿ: ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ (84) ಶನಿವಾರ ನಿಧನರಾದರು.
ಕಿನ್ನಿಗೋಳಿ ಅವರ ಸ್ವಗ್ರಹ ಉದಯಗಿರಿ, ಗೊಳಿಜೋರದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಓರ್ವ ಪುತ್ರ ಇದ್ದಾರೆ.
ಕಿನ್ನಿಗೋಳಿ ಅವರು ತೆಂಕು ಹಾಗೂ ಬಡಗು ಎರಡೂ ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ 55 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.
ಮುಖ್ಯಪ್ರಾಣ ಅವರು 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದರೂ ಅಗಾಧ ಪ್ರೌಢಿಮೆ ಹೊಂದಿದ್ದರು. ನಂತರ ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪ ಅವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡಿದ್ದರು. ಇವರ ಪಾತ್ರ ನಿರ್ವಹಣೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.