newsics.com
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರನ್ಯಾ ರಾವ್ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ ಮೊದಲ ವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ನಟಿ ರನ್ಯಾ ರಾವ್ ತಾಯಿ ರೋಹಿಣಿ ಹೈಕೋರ್ಟ್ ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ ಮಾಡಿದ್ದರು. ಡಿಆರ್ ಐ ಅಧಿಕಾರಿಗಳು ನನ್ನ ಮಗಳನ್ನು ಅಕ್ರಮ ಬಂಧನದಲ್ಲಿಟ್ಟಿದ್ದಾರೆ. ಈಗಾಗಲೇ ರನ್ಯಾ ರಾವ್ ಗೆ ಜಾಮೀನು ಮಂಜೂರಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ರನ್ಯಾ ರಾವ್ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಕಾಫೆಪೋಸಾ ಆಕ್ಟ್ ಹಾಕಲಾಗಿದೆ. ಇದನ್ನು ಪ್ರಶ್ನಿಸಿ ರನ್ಯಾ ರಾವ್ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ವೇಳೆ ಕಾಫೆಪೋಸಾ ಇತ್ಯರ್ಥ ಮಾಡೋದು ಸಲಹಾ ಮಂಡಳಿಯಲ್ಲಿ ತೀರ್ಮಾನವಾಗಬೇಕಿದೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಲಾಗಿದೆ.
ಮಾ. 3ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರನ್ಯಾ ರಾವ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವೇಳೆ ರನ್ಯಾ ಬಳಿ 12.56 ಕೋಟಿ ರೂ. ಮೌಲ್ಯದ ಚಿನ್ನ ದೊರೆತಿತ್ತು. ಬಳಿಕ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಮತ್ತು ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ನಡುವೆ ರನ್ಯಾ ವಿರುದ್ಧ ಕಾಫಿಪೋಸಾ ಅಡಿ ಬಂಧನ ಆದೇಶ ಹೊರಡಿಸಲಾಗಿತ್ತು.