newsics.com
ಬೆಂಗಳೂರಿನಲ್ಲಿ ಪಿಜಿ ಒಂದು ದೊಡ್ಡ ಉದ್ಯಮವಾಗಿಬಿಟ್ಟಿದೆ.ಆದ್ರೆ ದಿನಗಳು ಕಳೆದಂತೆ ಪಿಜಿ ಉದ್ಯಮದ ಮೇಲೆ ನಷ್ಟದ ಕರಿನೆರಳು ಬಿದ್ದಿದೆ.
ನಗರದ ಪ್ರತಿ ಏರಿಯಾದಲ್ಲೂ ಕನಿಷ್ಠ ಎರಡು ಪಿಜಿಗಳಾದರೂ ಬಂದ್ ಆಗಿವೆ. ಅಲ್ಲದೆ ಮೊದಲಿನಂತೆ ಪಿಜಿಗಳಿಗೆ ಡಿಮ್ಯಾಂಡ್ ಕೂಡ ಕಡಿಮೆಯಾಗಿದ್ದು, ಪಿಜಿ ಮಾಲೀಕರ ಆದಾಯ ಮೊದಲಿಗಿಂತ ಶೇ 25ರಷ್ಟು ಕಳೆದುಕೊಳ್ಳುತ್ತಿದ್ದಾರೆ. ಐಟಿ ಉದ್ಯೋಗಿಗಳೇ ಹೆಚ್ಚಾಗಿರುವ ಮಾರತ್‌ಹಳ್ಳಿ ಮತ್ತು ಸರ್ಜಾಪುರದಂತಹ ಸ್ಥಳಗಳಲ್ಲೇ ಪಿಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಚ್ಚಲ್ಪಡುತ್ತಿವೆ ಎನ್ನಲಾಗಿದೆ.
ಮಹದೇವಪುರದಲ್ಲಿ 100 ಪಿಜಿ ಬಂದ್
ಇದರ ಜೊತೆಗೆ ನಿಯಮಗಳನ್ನ ಉಲ್ಲಂಘಿಸಿದ್ದಕ್ಕಾಗಿ ಬಿಬಿಎಂಪಿ ಕೂಡ ಪಿಜಿ ಮಾಲೀಕರ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ. 40 ಅಡಿಗಿಂತಲೂ ಕಡಿಮೆ ಅಗಲವಿರುವ ವಸತಿ ಪ್ರದೇಶಗಳಲ್ಲಿ ಪಿಜಿಗಳನ್ನು ನಡೆಸಬಾರದು ಎಂಬ ನಿಯಮವೂ ಸೇರಿದಂತೆ ಸುರಕ್ಷತೆ ಮತ್ತು ಸ್ವಚ್ಛತೆಯ ಮೇಲೆ ಕೇಂದ್ರೀಕರಿಸಿದ ಹೆಚ್ಚಿನ ರೂಲ್ಸ್‌ಗಳಿಂದಾಗಿ ಮಹದೇವಪುರದಲ್ಲಿ ಸುಮಾರು 100 ಪಿಜಿಗಳು ಮುಚ್ಚಿವೆ. ಈ ಮೂಲಕ ಪಿಜಿ ಮಾಲೀಕರು ಈಗ ನಷ್ಟದ ಕೂಪಕ್ಕೆ ಸಿಲುಕಿದ್ದಾರೆ.
ಇನ್ನು ನಗರದಲ್ಲಿ ನೀರು ಮತ್ತು ವಿದ್ಯುತ್ ದರ ಏರಿಕೆಯಿಂದಾಗಿ ಗ್ರಾಹಕರ ಕೊರತೆ ಎದುರಾಗುತ್ತಿದೆ. ಹಾಗಾಗಿ ಕೈಗೆಟುಕುವ ಬೆಲೆಯಲ್ಲಿ ವ್ಯವಹಾರ ನಡೆಸುವುದು ಕಷ್ಟ ಎಂದು ಬೆಂಗಳೂರು ಪಿಜಿ ಮಾಲೀಕರ ಸಂಘ ಹೇಳಿಕೊಂಡಿದೆ.
ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿನ ಪೇಯಿಂಗ್ ಗೆಸ್ಟ್ ಹೌಸ್‌ನಲ್ಲಿ ಕೊಲೆ ಪ್ರಕರಣವೊಂದು ನಡೆದಿತ್ತು. ಅಲ್ಲಿವರೆಗೆ ಪಿಜಿಗಳಿಗೆ ಮೂಗುದಾರವೇ ಇರಲಿಲ್ಲ. ಈ ಕೊಲೆ ಪ್ರಕರಣ ನಡೆದ ಬಳಿಕ ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರು ಪಿಜಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಕೋವಿಡ್ ಬಳಿಕ ಪೊಲೀಸರು ಹಾಗೂ ಬಿಬಿಎಂಪಿ ಕ್ರಮಗಳಿಂದ ಬೆಂಗಳೂರಿನ ಪಿಜಿಗಳಲ್ಲಿ ಶೇ 25ರಷ್ಟು ನಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.