newsics.com
ಶಿವಮೊಗ್ಗ: ಜಿಲ್ಲೆಯ ಆಯನೂರು ಬಳಿಯ ಚಾಮುಂಡಿಪುರ ಗ್ರಾಮದ ವಾಸಿಯಾಗಿರುವ 80 ವರ್ಷದ ಶಾರದಾ ಅವರು ಲಕ್ಷಾಂತರ ರೂಪಾಯಿ ಬೆಲೆಬಾಳುವ ತಮ್ಮ ವಾಸದ ಮನೆ ಹಾಗೂ ಜೀವನ ನಿರ್ವಹಣೆಗೆಂದು ಬ್ಯಾಂಕ್ನಲ್ಲಿಟ್ಟದ್ದ 5 ಲಕ್ಷ ರೂಪಾಯಿ ಠೇವಣಿಯನ್ನು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರೆದುಕೊಟ್ಟಿದ್ದಾರೆ.
ನಾನು ಗ್ರಾಮದ ಚಾಮುಂಡಿ ದೇವಸ್ಥಾನದಲ್ಲಿ ನಾಲ್ಕೈದು ವರ್ಷ ಸೇವೆ ಮಾಡಿದ್ದೇನೆ. ಅಲ್ಲಿ ಕಸ ಗುಡಿಸುವ, ನೆಲ ಒರೆಸುವ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ನನ್ನ ಪತಿ ದಮ್ಮಿನಿಂದಾಗಿ ಮೃತಪಟ್ಟರು. ಇತ್ತೀಚೆಗೆ ದೇವಿ ನನಗೆ ಕನಸಿನ ರೂಪದಲ್ಲಿ ಬಂದು ಕಾಣಿಸುತ್ತಿದ್ದಳು. ಪತಿಯ ನಿಧನದ ನಂತರ ದೇವಿ ನನಗೆ ನಾನಾ ರೂಪದಲ್ಲಿ ಕನಸಿನಲ್ಲಿ ಬರುತ್ತಿದ್ದಳು. ಹೀಗಾಗಿ ನಾನು ಅಂತಿಮವಾಗಿ ಪತಿಯ ದುಡಿಮೆ ಹಣ ಹಾಗೂ ನಾನು ಗ್ರಾಮದ ಪ್ರಮುಖರ ಮನೆಯಲ್ಲಿ ಕೂಲಿ ಕೆಲಸ ಮಾಡಿ ದುಡಿದ ಹಣ ಹಾಗೂ ಮನೆಯನ್ನು ದೇವಸ್ಥಾನಕ್ಕೆ ಬರೆದುಕೊಟ್ಟಿದ್ದೇನೆ. ನನ್ನದೆಲ್ಲವನ್ನೂ ಆ ಅಮ್ಮನ ಪಾದಕ್ಕೆ ಅರ್ಪಿಸಿದ್ದೇನೆ ಎಂದು ಶಾರದಮ್ಮ ಹೇಳಿದ್ದಾರೆ.
ಶಾರದಮ್ಮ ಹಾಗೂ ಆಕೆಯ ಪತಿ ಯಲ್ಲಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಾಲ್ಕೈದು ವರ್ಷದ ಹಿಂದೆ ಯಲ್ಲಪ್ಪ ನಿಧನ ಹೊಂದಿದರು. ಈಗ ಶಾರದಮ್ಮ ಅವರು ತಾವು ವಾಸಿಸುತ್ತಿರುವ ಮನೆಯನ್ನು ವಿಲ್ ಮೂಲಕ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಅವರು ದುಡಿದಿಟ್ಟಿದ್ದ ಸುಮಾರು 5 ಲಕ್ಷ ರೂಪಾಯಿ ನಗದನ್ನೂ ದೇವಸ್ಥಾನ ಸಮಿತಿಯವರಿಗೆ ನೀಡಿದ್ದಾರೆ. ಶಾರದಮ್ಮ ಬದುಕಿರುವವರೆಗೆ ಈಗಿರುವ ಮನೆಯಲ್ಲೇ ವಾಸವಿರುತ್ತಾರೆ. ನಂತರ ಅವರ ಮನೆಯನ್ನು ದೇವಸ್ಥಾನ ಸಮಿತಿಯವರು ವಶಕ್ಕೆ ತೆಗೆದುಕೊಳ್ಳುತ್ತಾರೆ. ಮಕ್ಕಳಿಲ್ಲದ ಯಲ್ಲಪ್ಪ ಹಾಗೂ ಶಾರದಮ್ಮ ದಂಪತಿ ತಮ್ಮ ನಿಧನದ ನಂತರ ತಮ್ಮ ಆಸ್ತಿ ಗ್ರಾಮದ ದೇವಸ್ಥಾನಕ್ಕೆ ನೀಡಬೇಕು ಎಂದು ತೀರ್ಮಾನಿಸಿದ್ದರು. ಅದರಂತೆಯೇ ನಡೆದುಕೊಂಡಿದ್ದಾರೆ. ಈ ಮೂಲಕ ಉಳಿದವರಿಗೆ ಮಾದರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.