ಆಹಾರ ಸೇವನೆ ಪ್ರತೀ ಜೀವಿಗೆ ಅಗತ್ಯವಾಗಿರುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹರವನ್ನುಸೇವನೆ ಮಾಡುವುದರ ಜೊತೆಗೆ ಆಹಾರ ಸೇವನೆಯ ಸಮಯ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಯಾವಾಗಲೂ ಊಟವಾದ ತಕ್ಷಣ ಮಲಗಬಾರದು, ಅಥವಾ ಊಟವಾದ ತಕ್ಷಣ ಸಿಹಿ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು.
ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟ ಎಂದು ಹೇಳಲಾಗುತ್ತದೆ. ಅತ್ಯುತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಊಟಗಳ ನಡುವೆ ಆರೋಗ್ಯಕರ ಅಂತರವನ್ನು ರಚಿಸುವುದು ಅತ್ಯಗತ್ಯ ಎಂದು ವೈದ್ಯರು ಹೇಳುತ್ತಾರೆ. ರಾತ್ರಿಯ ಊಟ ಮತ್ತು ಉಪಹಾರದ ನಡುವಿನ ಅತ್ಯುತ್ತಮ ಅಂತರವು ಸರಿಸುಮಾರು 12 ರಿಂದ 14 ಗಂಟೆಗಳಿರಬೇಕು.
ಅದರಲ್ಲೂ ರಾತ್ರಿ ಊಟ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಖ್ಯವಾಗಿರುತ್ತದೆ. ಸಂಜೆ 6:00 ರಿಂದ ರಾತ್ರಿ 8:00 ರವರೆಗೆ ರಾತ್ರಿಯ ಊಟವನ್ನು ಸೇವಿಸುವುದರಿಂದ ದೇಹದಲ್ಲಿ ಜೀರ್ಣಕಾರಿ ಸಮಸ್ಯೆಗಳು ಉಂಟಾಗುವುದಿಲ್ಲ ಮತ್ತು ಉತ್ತಮ ನಿದ್ರೆಯನ್ನು ಪಡೆಯಬಹುದು.
ಮಲಗುವ ಮೊದಲು ಹೊಟ್ಟೆ ತುಂಬಾ ತಿಂದರೆ ಅದರಿಂದ ನಿದ್ರೆಯ ಆವರ್ತನದ ಮೇಲೆ ಪರಿಣಾಮ ಬೀರುವುದು. ಹೀಗಾಗಿ ಮಲಗುವ ಒಂದು ಗಂಟೆ ಮೊದಲು ಊಟ ಮಾಡಿದರೆ ತುಂಬಾ ಒಳ್ಳೆಯದು.
ರಾತ್ರಿ ವೇಳೆ ನಮ್ಮ ದೇಹವು ವಿಶ್ರಾಂತಿ ಬಯಸುತ್ತದೆ. ನಾವು ತಡವಾಗಿ ಊಟ ಮಾಡಿದಾಗ ದೇಹವು ವಿಶ್ರಾಂತಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ಆದರೆ ಮೊದಲೇ ಊಟ ಮಾಡುವುದರಿಂದ ದೇಹವು ಆರಾಮವಾಗಿ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತದೆ. ಮಾತ್ರವಲ್ಲ, ನಿದ್ರೆಯು ಕೂಡ ತುಂಬಾ ಚೆನ್ನಾಗಿ ಆಗುತ್ತದೆ. ಒಳ್ಳೆಯ ನಿದ್ರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ.