newsics.com
ಮುಂಬೈ: ಪ್ರಸಕ್ತ ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸತತ ಎರಡನೇ ಬಾರಿಗೆ ರೆಪೊ ದರದಲ್ಲಿ ಶೇ 0.25ರಷ್ಟು ಕಡಿತಗೊಳಿಸಿದೆ. ಶೇ 6.25ರಷ್ಟಿದ್ದ ರೆಪೊ ದರವು ಶೇ 6ಕ್ಕೆ ಇಳಿದಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಕಡಿತಗೊಳಿಸುವ ಸುಳಿವು ಕೂಡ ನೀಡಿದೆ.
ಇದರಿಂದ ಬ್ಯಾಂಕ್‌ಗಳಲ್ಲಿ ಈ ಬಡ್ಡಿದರ ಆಧರಿತ ಗೃಹ, ಕಾರು ಮತ್ತು ವೈಯಕ್ತಿಕ ಸಾಲ ಪಡೆದವರಿಗೆ ಸಾಲ ಮರುಪಾವತಿಯ ಸಮಾನ ಮಾಸಿಕ ಕಂತಿನ (ಇಎಂಐ) ಮೊತ್ತವೂ ಕಡಿಮೆಯಾಗಲಿದೆ. ಅಲ್ಲದೆ, ಗೃಹ ಮತ್ತು ವಾಹನ ಸಾಲಗಳು ಅಗ್ಗವಾಗಲಿವೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮುಕ್ತಾಯಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ, ಎಲ್ಲಾ ಆರು ಸದಸ್ಯರು ಬಡ್ಡಿದರ ಕಡಿತಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ವಾಣಿಜ್ಯ ಬ್ಯಾಂಕ್‌ಗಳಿಗೆ ಹಣಕಾಸಿನ ಕೊರತೆ ನೀಗಿಸಲು ಆರ್‌ಬಿಐ ಸಾಲ ಸೌಲಭ್ಯ ನೀಡುತ್ತದೆ. ಈ ಸಾಲಕ್ಕೆ ವಿಧಿಸುವ ಬಡ್ಡಿಯೇ ‘ರೆಪೊ ದರ’. ಇದು ಹೆಚ್ಚಳವಾದರೆ ಬ್ಯಾಂಕ್‌ಗಳ ಸಾಲದ ವೆಚ್ಚ ಪ್ರಮಾಣವೂ ಏರಿಕೆಯಾಗುತ್ತದೆ. ಬ್ಯಾಂಕ್‌ಗಳು ಸಹಜವಾಗಿ ಈ ಹೊರೆಯನ್ನು ಗ್ರಾಹಕರ ಮೇಲೆ ಹೇರುತ್ತವೆ. ಇದರಿಂದ ಗೃಹ, ಕಾರು ಮತ್ತು ವೈಯಕ್ತಿಕ ಸಾಲದ ಇಎಂಐ ಪಾವತಿ ಮೊತ್ತದಲ್ಲಿ ಏರಿಕೆಯಾಗುತ್ತದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಹೋತ್ರಾ, ‘ಈ ಮೊದಲು ಸಭೆಯು ಹಣದುಬ್ಬರ ನಿಯಂತ್ರಿಸುವ ಮೂಲಕ ಆರ್ಥಿಕ ಬೆಳವಣಿಗೆಯ ಸ್ಥಿರತೆಗೆ ಒತ್ತು ನೀಡಲು ‘ತಟಸ್ಥ’ ನೀತಿ ಅನುಸರಿಸಿತ್ತು. ಈಗ ‘ಹೊಂದಾಣಿಕೆ’ ನಿಲುವು ತಳೆದಿದೆ ಎಂದು ತಿಳಿಸಿದರು.
‘ಮುಂದಿನ ಎಂಪಿಸಿ ಸಭೆಯ ವೇಳೆಗೆ ದೇಶದಲ್ಲಿ ಆರ್ಥಿಕ ಅನಿಶ್ಚಿತ ಸ್ಥಿತಿ ಎದುರಾದರೆ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಅಥವಾ ಕಡಿತ ಮುಂದುವರಿಸುವುದು ಈ ನಿಲುವಿನ ಹಿಂದಿರುವ ಉದ್ದೇಶವಾಗಿದೆ’ ಎಂದು ಸ್ಪಷ್ಟಪಡಿಸಿದರು.
ರೆಪೊ ದರ ಇಳಿಕೆಯಾದಾಗ ಉಳಿತಾಯ ಯೋಜನೆಗಳ ಮೇಲೆ ಲಭಿಸುವ ಬಡ್ಡಿ ಕೂಡ ಕಡಿಮೆಯಾಗುತ್ತದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಬ್ಯಾಂಕ್‌ಗಳು ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಇಳಿಸಲು ಮುಂದಾಗುವುದಿಲ್ಲ. ಹಂತ ಹಂತವಾಗಿ ಈ ನಿಟ್ಟಿನಲ್ಲಿ ಕ್ರಮವಹಿಸುತ್ತವೆ.
ಜಾಗತಿಕ ಮಟ್ಟದಲ್ಲಿ ತಲೆದೋರಿರುವ ವ್ಯಾಪಾರ ಸಮರ ಮತ್ತು ಆರ್ಥಿಕ ಅನಿಶ್ಚಿತ ಸ್ಥಿತಿಯಿಂದಾಗಿ 2025-26ನೇ ಆರ್ಥಿಕ ವರ್ಷದಲ್ಲಿನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವನ್ನು ಆರ್‌ಬಿಐ ಪರಿಷ್ಕರಿಸಿದೆ. ಈ ಮೊದಲು ಜಿಡಿಪಿಯು ಶೇ 6.7ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಲಾಗಿತ್ತು. ಇದನ್ನು ಶೇ 6.5ಕ್ಕೆ ತಗ್ಗಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಮೊದಲು ಶೇ 4.2ರಷ್ಟು ದಾಖಲಾಗಲಿದೆ ಎಂದು ಅಂದಾಜಿಸಲಾಗಿತ್ತು.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಮತ್ತು ಯುಕೊ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ 0.25ರಷ್ಟು ಕಡಿತಗೊಳಿಸಿವೆ. ಆರ್‌ಬಿಐ ರೆಪೊ ದರ ಕಡಿತಗೊಳಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಂಡಿವೆ. ಉಳಿದ ಬ್ಯಾಂಕ್‌ಗಳು ಬಡ್ಡಿದರ ಇಳಿಕೆ ಮಾಡುವ ನಿರೀಕ್ಷೆಯಿದೆ. ಬ್ಯಾಂಕ್ ಆಫ್ ಇಂಡಿಯಾವು ರೆಪೊ ಆಧರಿತ ಸಾಲದ ಬಡ್ಡಿದರವನ್ನು ಶೇ 9.10ರಿಂದ ಶೇ 8.85ಕ್ಕೆ ತಗ್ಗಿಸಿದೆ. ಬುಧವಾರದಿಂದಲೇ ಈ ಪರಿಷ್ಕೃತ ದರ ಜಾರಿಗೆ ಬಂದಿದೆ. ಯುಕೊ ಬ್ಯಾಂಕ್ ರೆಪೊ ಆಧರಿತ ಸಾಲದ ಬಡ್ಡಿದರವನ್ನು ಶೇ. 8.8ಕ್ಕೆ ನಿಗದಿಪಡಿಸಿದ್ದು ಗುರುವಾರದಿಂದ ಜಾರಿಗೆ ಬರಲಿದೆ.