newsics.com | ನ್ಯೂಸಿಕ್ಸ್
ಬೆಂಗಳೂರು; ರಾಜಧಾನಿಯ ಹೆದ್ದಾರಿಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ರಸ್ತೆಗಳ ಸುಧಾರಣೆಯ ನಡುವೆ, ನಮ್ಮ ಕರ್ನಾಟಕದ ‘ಬೆಂಗಳೂರು-ಮೈಸೂರು’ ಕಾರಿಡಾರ್‌ಗೆ ಜಾಗತಿಕ ಮಟ್ಟದ ಮಾನ್ಯತೆ ಲಭಿಸಿದೆ. ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಜನರು ಕಾರು ಹಾಗೂ ಟ್ಯಾಕ್ಸಿಗಳ ಮೂಲಕ ಸಂಚರಿಸುವ ಹೆದ್ದಾರಿಗಳ ಪಟ್ಟಿಯಲ್ಲಿ ಬೆಂಗಳೂರು-ಮೈಸೂರು ರಸ್ತೆ ಬರೋಬ್ಬರಿ 3ನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ಜಾಗತಿಕ ಟ್ಯಾಕ್ಸಿ ಸೇವಾ ಸಂಸ್ಥೆ ‘ಉಬರ್’ ಬಿಡುಗಡೆ ಮಾಡಿರುವ ‘ಇಂಟರ್‌ಸಿಟಿ ಟ್ರಾವೆಲ್ ಇಂಡೆಕ್ಸ್’ ವರದಿಯು ಈ ಮಹತ್ವದ ವಿಷಯವನ್ನು ಬಹಿರಂಗಪಡಿಸಿದೆ.
ಉಬರ್ ಸಂಸ್ಥೆಯು 2026ರ ಏಪ್ರಿಲ್‌ನಿಂದ ಜೂನ್‌ವರೆಗಿನ ಪ್ರಯಾಣದ ದತ್ತಾಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ದೇಶದಲ್ಲೇ ಗರಿಷ್ಠ ಸವಾರಿ ಕಂಡ ಬ್ಯುಸಿ ಮಾರ್ಗಗಳ ಪಟ್ಟಿಯಲ್ಲಿ ಮುಂಬೈ-ಪುಣೆ ಪ್ರಥಮ ಸ್ಥಾನ ಹಾಗೂ ದೆಹಲಿ-ಆಗ್ರಾ ದ್ವಿತೀಯ ಸ್ಥಾನದಲ್ಲಿದ್ದರೆ, ನಮ್ಮ ಬೆಂಗಳೂರು-ಮೈಸೂರು ಮಾರ್ಗ ತೃತೀಯ ಸ್ಥಾನ ಗಿಟ್ಟಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ಲಕ್ನೋ-ಕಾನ್ಪುರ ಹಾಗೂ ಅಹಮದಾಬಾದ್-ವಡೋದರಾ ಮಾರ್ಗಗಳಿವೆ.
ಇಷ್ಟೇ ಅಲ್ಲದೆ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರ್ಗಗಳ ಪಟ್ಟಿಯಲ್ಲೂ ಬೆಂಗಳೂರು-ಮೈಸೂರು ಕಾರಿಡಾರ್ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಉಬರ್ ಗ್ರಾಹಕರು ನೆಚ್ಚಿಕೊಂಡಿರುವ ಧಾರ್ಮಿಕ ಹಾಗೂ ಪಾರಂಪರಿಕ ತಾಣಗಳಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ದೇಶದಲ್ಲೇ 2ನೇ ಅತ್ಯಂತ ಜನಪ್ರಿಯ ನಗರವಾಗಿ ಹೊರಹೊಮ್ಮಿದೆ. ಇನ್ನು ಬೆಂಗಳೂರಿನ ನಿವಾಸಿಗಳು ಒಂದೇ ದಿನದಲ್ಲಿ ಹೋಗಿ ಬರಲು ಉಬರ್ ಮೂಲಕ ಹೆಚ್ಚಾಗಿ ರೌಂಡ್-ಟ್ರಿಪ್ ಬುಕ್ ಮಾಡುವ ತಾಣಗಳಾಗಿ ನಂದಿ ಬೆಟ್ಟ, ಮಾಗಡಿ, ತಮಿಳುನಾಡಿನ ಧರ್ಮಪುರಿ ಹಾಗೂ ಮಂಡ್ಯ ನಗರಗಳು ಗುರುತಿಸಿಕೊಂಡಿವೆ.
BMRCL ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಶೇ.12ರಷ್ಟು ಟಿಕೆಟ್ ದರ ಏರಿಕೆಗೆ BMRCL ಪ್ರಸ್ತಾಪ