newsics.com
ಬೆಂಗಳೂರು: ವಿಶ್ವದ ಸಕಲ ಜೀವರಾಶಿಗಳಿಗೆ ನೀರು ಜೀವನಾಧಾರ. ಜಲವೇ ಸಂಜೀವಿನಿ. ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಹೆಚ್ಚಾಗುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ. ನೀರಿನ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಶ್ರಮಿಸುತ್ತಿದ್ದು ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ವಿಶ್ವ ಜಲ ದಿನದ ಇತಿಹಾಸವೇನು?
1993ರಲ್ಲಿ ಬ್ರೆಜಿಲ್‌ನ ರಿಯೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಜಲ ಸಂರಕ್ಷಣೆಯ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು ಹಾಗೂ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವ ಜಲ ದಿನವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಈ ದಿನದ ಮಹತ್ವವೇನು?
ಜಗತ್ತಿನಲ್ಲಿ ಅಂತರ್ಜಲದ ಸಂರಕ್ಷಣೆ, ಸುಸ್ಥಿರ ಬಳಕೆ ಹಾಗೂ ಅಂತರ್ಜಲ ಪ್ರಮಾಣ ಹೆಚ್ಚಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ. ಹಾಗಾಗಿ ನೀರಿನ ಅಭಾವ, ಕಲುಷಿತಗೊಳಿಸುವಿಕೆ, ಹವಾಮಾನದ ಮೇಲಿನ ಪರಿಣಾಮ ಹೀಗೆ ಒಟ್ಟಾರೆಯಾಗಿ ನೀರಿನ ಕುರಿತು ಜನರಲ್ಲಿ ತಿಳಿವಳಿಕೆ ನೀಡುವುದು ಹಾಗೂ 2030ರ ವೇಳೆಗೆ ಜಗತ್ತಿನಾದ್ಯಂತ ಪ್ರತಿಯೊಬ್ಬರಿಗೂ ಸ್ವಚ್ಛ ಕುಡಿಯುವ ನೀರೊದಗಿಸುವುದು, ನೈರ್ಮಲ್ಯ ಕಾಪಾಡುವುದು ಜಲ ದಿನಾಚರಣೆಯ ಮುಖ್ಯ ಗುರಿಯಾಗಿದೆ.