newsics.com
ಕುಂಭಮೇಳದಲ್ಲಿ ದೋಣಿಗಳನ್ನು ಓಡಿಸುವ ಮೂಲಕ ಪಿಂಟು ಮಹಾರಾ ಎಂಬುವವರು 45 ದಿನಗಳಲ್ಲಿ 30 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಳ ನಡುವೆ ಪಿಂಟು ಮತ್ತು ಅವರ ಕುಟುಂಬದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಪಿಂಟು ಸೇರಿದಂತೆ ಬಹುತೇಕ ಕುಟುಂಬದ ಸದಸ್ಯರು ಅಪರಾಧ ಹಿನ್ನೆಲೆಯನ್ನು ಹೊಂದಿದ್ದರು. ಧೀರ್ಘ ಸಮಯದಿಂದ ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಪಿಂಟು ಕುಟುಂಬದ ಕೆಲ ಸದಸ್ಯರು ಜೈಲಿಗೂ ಹೋಗಿ ಬಂದಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.
21 ಕ್ರಿಮಿನಲ್ ಪ್ರಕರಣಗಳು
ನಾವಿಕ ಕುಟುಂಬದ ಯಜಮಾನನಾಗಿರುವ ಪಿಂಟು ಮೆಹ್ರಾ ವಿರುದ್ಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ 21 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೇ ಪಿಂಟು ಮೆಹ್ರಾ ವಿರುದ್ಧ ಗೂಂಡಾ ಕಾಯ್ದೆ ಮತ್ತು ಗ್ಯಾಂಗ್ಸ್ಟರ್ ಕಾಯ್ದೆಯಡಿ ಎರಡು ಬಾರಿ ಕ್ರಮ ಕೈಗೊಳ್ಳಲಾಗಿದೆ. ನಾವಿಕ ಪಿಂಟು ಮೆಹ್ರಾ ಅಪರಾಧ ಇತಿಹಾಸವನ್ನು ಹೊಂದಿದ್ದಾನೆ. ಕುಟುಂಬದ ಪ್ರಾಬಲ್ಯಕ್ಕಾಗಿ ನಡೆದ ಸಂಘರ್ಷದಲ್ಲಿ ಐವರ ಕೊಲೆಯೂ ನಡೆದಿದೆ. ಪ್ರಯಾಗ್ರಾಜ್ನ ನೈನಿ ಪೊಲೀಸ್ ಠಾಣೆಯಲ್ಲಿ ನಾವಿಕ ಪಿಂಟು ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಪಿಂಟು ತಂದೆ, ಸೋದರರು ಸಹ ಕ್ರಿಮಿನಲ್ಸ್
ಇನ್ನು ಪಿಂಟು ತಂದೆ ರಾಮ್ ಸಹಾರೆ ಅಲಿಯಾಸ್ ಬಚ್ಚಾ ಸಹ ಓರ್ವ ಕ್ರಿಮಿನಲ್ ಆಗಿದ್ದನು. ಜೂನ್ 25, 2018 ರಂದು ಜೈಲಿನಲ್ಲಿದ್ದಾಗಲೇ ರಾಮ್ ಸಹಾರೆ ನಿಧನವಾಗಿತ್ತು. ಪಿಂಟುವಿನ ಅಣ್ಣ ಆನಂದ್ ಕೂಡಲ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ. ಸುಲಿಗೆ ಮತ್ತು ವಸೂಲಿಗೆ ಸಂಬಂಧಿಸಿದ ವಿವಾದದಲ್ಲಿ ಪಿಂಟು ಸೋದರ ಆನಂದ್ನ ಕೊಲೆಯಾಗಿತ್ತು. ಇನ್ನೋರ್ವ ಸೋದರ ಅರವಿಂದ್ ಮೇಲೆಯೂ ಹಲವು ಕೇಸ್ಗಳಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದಾನೆ.
30 ಕೋಟಿ ಹಣ ಸಂಪಾದಿಸಲು ಸಾಧ್ಯವೆ?
ಪ್ರಯಾಗ್ರಾಜ್ ಮೇಳ ಪ್ರಾಧಿಕಾರವು ವಿವಿಧ ಘಾಟ್ಗಳಿಂದ ಸಂಗಮಕ್ಕೆ ದರವನ್ನು 75 ರೂ.ನಿಂದ 160 ರೂ.ಗೆ ನಿಗದಿಪಡಿಸಿತ್ತು. ಒಂದು ದೋಣಿಯಲ್ಲಿ ಇಬ್ಬರು ಚಾಲಕರು ಸೇರಿದಂತೆ ಗರಿಷ್ಠ ಎಂಟು ಜನರು ಪ್ರಯಾಣಿಸಬಹುದು. 130 ದೋಣಿಗಳು ದಿನಕ್ಕೆ ಎಂಟು ಸುತ್ತು ಹಾಕಿದ್ರೆ ಒಂದು ದೋಣಿಯಿಂದ ಗರಿಷ್ಠ 6,400 ರೂಪಾಯಿ ಗಳಿಸಬಹುದು.ಇಡೀ ಮಹಾಕುಂಭದ ಸಮಯದಲ್ಲಿ 130 ದೋಣಿಗಳಿಂದ ಗರಿಷ್ಠ 3 ಕೋಟಿ 74 ಲಕ್ಷ 40 ಸಾವಿರ ರೂ.ಗಳ ಗಳಿಕೆ ಸಾಧ್ಯ . ಸರ್ಕಾರಿ ದರದಲ್ಲಿ ದೋಣಿಗಳನ್ನು ನಡೆಸಿದ್ದೇ ಆದ್ರೆ 30 ಕೋಟಿ ರೂ. ಗಳಿಸುವುದು ಸಾಧ್ಯವಿಲ್ಲ. ಭಕ್ತರಿಂದ ಹೆಚ್ಚುವರಿ ಹಣ ಪಡೆದುಕೊಂಡಿದ್ರೆ ಇದು ಸಾಧ್ಯ. ಆದ್ರೆ ಪಿಂಟು ಕುಟುಂಬ 30 ಕೋಟಿಯಲ್ಲಿ ಭಕ್ತರು ನೀಡಿದ ಟಿಪ್ಸ್ ಸೇರಿದೆ ಎಂದು ಹೇಳಿಕೊಂಡಿದೆ.