newsics.com
ಬೆಂಗಳೂರು : ನಮ್ಮ ಮೆಟ್ರೋ ಸಾರ್ವಜನಿಕರಿಗೆ ಹೊಸ ಮಾರ್ಗ ನಿರ್ಮಿಸುತ್ತಿದೆ. ಅದಕ್ಕಾಗಿ ರೈಲು ಪೂರೈಕೆಗೆಂದು ವಿದೇಶಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹೀಗೆ ಒಪ್ಪಂದದ ಮೇರೆಗೆ ವಿದೇಶಕ್ಕೆ ತಪಾಸಣೆಗೆ ತೆರಳಬೇಕಿದ್ದ ಮೆಟ್ರೋ ತಂತ್ರಜ್ಞರ ಬದಲಾಗಿ ಹಣಕಾಸು ನಿರ್ದೇಶಕರು ವಿದೇಶಕ್ಕೆ ತೆರಳಿ ಮೋಜು ಮಾಡಿದ್ದಾರೆ. ಸದ್ಯ ನಿಗಮದ ಹಣ ದುಂದು ವೆಚ್ಚ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಉಪಕರಣ ಅಳವಡಿಕೆ ಆಗಬೇಕಿದೆ. ಅದರ ತಪಾಸಣೆ ನೆಪದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ತಂತ್ರಜ್ಞರ ಬದಲಾಗಿ ಹಣಕಾಸು ವಿಭಾಗದ ನಿರ್ದೇಶಕ ಜರ್ಮನಿಗೆ ತೆರಳಿದ್ದಾರೆ. ಅವರು ಒಬ್ಬರೇ ಹೋಗದೇ ಪತ್ನಿಯನ್ನು ಜೊತೆಗೆ ಕರೆದುಕೊಂಡು ಹೋಗಿ ವಿದೇಶ ಪ್ರವಾಸ ಮುಗಿಸಿ ಬಂದಿದ್ದಾರೆ. ಈ ಘಟನೆ ಸುಮಾರು ಎರಡು ವರ್ಷಗಳ ಹಿಂದೆ ನಡೆದಿದೆ. ಆ ನಿರ್ದೇಶಕರ ವಿರುದ್ಧ ತನಿಖೆ ನಡೆಸುವಂತೆ BMRCL ನೌಕರರ ಸಂಘ ಆಗ್ರಹಿಸಿದೆ. ಸಂಘವು, ಇಲ್ಲಿ ದುಂದು ವೆಚ್ಚವಾಗಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದೆ.
ಇದೇ ವಿಚಾರವಾಗಿ ನೌಕರರ ಸಂಘವು ಈ ಬಗ್ಗೆ ಪತ್ರ ಬರೆದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರಿಗೆ ದೂರು ಕೊಟ್ಟಿದೆ.