newsics.com
ನವದೆಹಲಿ : ಶ್ರೀಕೃಷ್ಣನ ಕರ್ಮಭೂಮಿ ದ್ವಾರಕಾದಲ್ಲಿ ನಾಲ್ಕು ಸಾವಿರ ವರ್ಷಗಳ ರಹಸ್ಯವನ್ನು ಅರಿಯಲು ಪುರಾತತ್ವ ಸರ್ವೇಕ್ಷಣಾ ಇಲಾಖೆಯ ತಂಡ, ಅರಬ್ಬೀ ಸಮುದ್ರದ ದ್ವಾರಕಾ ಕರಾವಳಿಯಲ್ಲಿ ಎರಡನೇ ಬಾರಿಗೆ ಧುಮುಕಿದೆ.
ಆಳ ಸಮುದ್ರದ ಮುಳುಗು/ಈಜು ತಜ್ಞರ ತಂಡ ಮತ್ತೊಮ್ಮೆ, ಅರಬ್ಬೀ ಸಮುದ್ರದ ಗುಜರಾತ್ ಕರಾವಳಿಯ ಸಮುದ್ರಕ್ಕೆ ಧುಮುಕಿದೆ.
ಈ ಹಿಂದೆ ಉತ್ಖನನ ನಡೆಸಿದ ವೇಳೆ 500 ಮೀಟರ್ ನಷ್ಟು ಉದ್ದದ ಗೋಡೆ ಪತ್ತೆಯಾಗಿತ್ತು. ಇದು, ಕ್ರಿಸ್ತಪೂರ್ವ ಕಾಲದ್ದು ಎಂದು ಇಲಾಖೆ ಅಭಿಪ್ರಾಯ ಪಟ್ಟಿತ್ತು.
ಶ್ರೀಕೃಷ್ಣನ ಕರ್ಮಭೂಮಿ ಎಂದೇ ಬಿಂಬಿತವಾಗಿರುವ ದ್ವಾರಕಾದ ಹಿಂದಿನ ಆಕರ್ಷಣೆ, ರಹಸ್ಯ ಏನು ಎನ್ನುವುದನ್ನು ತಿಳಿಯುವ ಉದ್ದೇಶದಿಂದ ಎಂ.ಆರ್.ರಾವ್ ಅವರ ತಂಡ ಸಮುದ್ರಾದಳದಲ್ಲಿ ಶೋಧ ನಡೆಸಿತ್ತು. ಪತ್ತೆಯಾದ ಗೋಡೆಗಳು ಕ್ರಿ.ಪೂ. 1528 ರಿಂದ 3000ದವರೆಗಿನ ಅವಧಿಯದ್ದು ಎಂದು ಅಧಿಕಾರಿಗಳು ಹೇಳಿದ್ದರು.
ದ್ವಾರಕಾ ನಗರವನ್ನು ಹಿಂದೂಗಳ ಏಳು ಪವಿತ್ರ ನಗರ ( ಅಯೋಧ್ಯಾ, ಮಥುರಾ, ಹರಿದ್ವಾರ, ವಾರಣಾಸಿ, ಕಾಂಚೀಪುರಂ, ಉಜ್ಜೈನಿ, ದ್ವಾರಕಾ) ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಮಥುರಾ ತೊರೆದ ನಂತರ ಶ್ರೀಕೃಷ್ಣ, ದ್ವಾರಕಾ ನಗರವನ್ನು ನಿರ್ಮಿಸಿದ ಎನ್ನುವ ನಂಬಿಕೆಯಿದೆ. ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಿದ ನಂತರ, ಕಲಿಯುಗದ ಆರಂಭವಾಯಿತು ಎಂದೇ ಬಿಂಬಿತವಾಗಿದೆ.